ಬೆಂಗಳೂರು :ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಬಿಜೆಪಿಗೆ ಅರಿವಾಗಿದೆ. ಈ ಕಾರಣಕ್ಕಾಗಿಯೇ ಜಾತಿ-ಧರ್ಮ ಸ್ವಾಮೀಜಿಗಳನ್ನು ತರುವ ಕಾರ್ಯವನ್ನು ಮಾಡುತ್ತಿದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಅವರು ಮಾತನಾಡಿದರು.
ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಆಕ್ರೋಶ ವ್ಯಕ್ತಪಡಿಸಿರುವುದು.. ಹೈಕೋರ್ಟ್ ತೀರ್ಪನ್ನ ಕಾಂಗ್ರೆಸ್ ಸ್ವಾಗತಿಸಿದೆ :ಇತ್ತೀಚೆಗೆ ಹಿಜಾಬ್ ಪ್ರಕರಣವನ್ನು ಮುಂದಿಟ್ಟು ಅನಗತ್ಯ ವಿವಾದ ಮಾಡಿದೆ. ಹೈಕೋರ್ಟ್ ಸಮವಸ್ತ್ರವನ್ನು ಹಾಕಬೇಕು ಎಂದು ತೀರ್ಪು ನೀಡಿದೆ. ಇದನ್ನು ಕಾಂಗ್ರೆಸ್ ಸ್ವಾಗತಿಸಿದೆ. ಪಕ್ಷದ ಶಾಸಕಾಂಗ ನಾಯಕ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಇದನ್ನು ಸ್ವಾಗತಿಸಿದ್ದಾರೆ. ಎಲ್ಲಿಯೂ ಕೋರ್ಟ್ ಆದೇಶವನ್ನು ಪರಿಪಾಲನೆ ಮಾಡಬೇಡಿ ಎಂದು ಸಿದ್ದರಾಮಯ್ಯ ಹೇಳಿಲ್ಲ.
ಸಿದ್ದರಾಮಯ್ಯನವರು ಯಾವುದೇ ಸ್ವಾಮೀಜಿಗಳಿಗೆ ಅವಮಾನ ಮಾಡಿಲ್ಲ: ಆದರೆ, ಇತ್ತೀಚೆಗೆ ವಿಧಾನಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ ಸಂದರ್ಭ ಇದೊಂದು ಭಾವನಾತ್ಮಕ ವಿಚಾರವಾಗುತ್ತದೆ. ವಿದ್ಯಾರ್ಥಿನಿಯರು ಪರೀಕ್ಷೆಗೆ ಹೋಗುತ್ತಿಲ್ಲ. ಸಮವಸ್ತ್ರವೇ ಇರಲಿ, ದುಪಟ್ಟಾವನ್ನು ತಲೆ ಮೇಲೆ ಹಾಕಿಕೊಂಡರೆ ತಪ್ಪೇನು? ಸಂಬಂಧಿಸಿದ ಅವರನ್ನ ಕರೆದು ಮಾತನಾಡಿ ಎಂದು ಹೇಳಿದ್ದಾರೆ.
ಈ ಬಗ್ಗೆ ಸರ್ಕಾರ ಏನು ಮಾತನಾಡಲು ಸಿದ್ಧವಿಲ್ಲ. ಸಿದ್ದರಾಮಯ್ಯ ತಮ್ಮ ಗ್ರಾಮಕ್ಕೆ ತೆರಳಿದ ಸಂದರ್ಭ ಮಾಧ್ಯಮಗಳು ಮಾತನಾಡಿಸಿದಾಗ, ಸಮಾಜದಲ್ಲಿ ಶಾಂತಿ ಇರಬೇಕು. ಎಲ್ಲ ಧರ್ಮಗಳು ಸಮಾನವಾಗಿ ಹೋಗಬೇಕು ಎಂಬ ಉದ್ದೇಶದಿಂದ ಎಲ್ಲಾ ಧರ್ಮದಲ್ಲೂ ತಲೆಯ ಮೇಲೆ ಶಾಲು ಹಾಕಿಕೊಳ್ಳುವ ಸಂಪ್ರದಾಯವಿದೆ ಎಂದಿದ್ದಾರೆ ಹೊರತು, ಹಿಜಾಬ್ ವಿಚಾರವನ್ನ ತಂದಿಲ್ಲ. ಹಿಂದೆ ನಿಂತ ಒಬ್ಬ ವ್ಯಕ್ತಿ ಸ್ವಾಮೀಜಿಗಳು ಸಹ ತಲೆ ಮೇಲೆ ಬಟ್ಟೆ ಹಾಕುತ್ತಾರೆ ಎಂದಿದ್ದಾರೆ ಹೊರತು, ಯಾವುದೇ ಸ್ವಾಮೀಜಿಗಳಿಗೆ ಅವಮಾನ ಮಾಡುವ ಕಾರ್ಯ ಮಾಡಿಲ್ಲ ಎಂದರು.
ಬಿಜೆಪಿ ಅಧಿಕಾರದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ : ಬಿಜೆಪಿ ವಾಮಮಾರ್ಗದಿಂದ ಅಧಿಕಾರ ಹಿಡಿದಿದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಕೂಡ ಅಭಿವೃದ್ಧಿ ಆಗಿಲ್ಲ. ಇವಾಗ ಬೊಮ್ಮಾಯಿ ಸಿಎಂ ಆಗಿದ್ದಾರೆ. ಆದರೆ, ಅಭಿವೃದ್ಧಿ ಕಾರ್ಯ ಯಾವುದೂ ಕಾಣುತ್ತಿಲ್ಲ. ಬಿಜೆಪಿ ಸರ್ಕಾರ ಗುತ್ತಿಗೆದಾರರಿಂದ 40% ಕಮಿಷನ್ ಪಡೆಯುತ್ತಿದೆ ಎಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಈ ಎಲ್ಲ ವಿಚಾರಗಳನ್ನು ಮರೆಮಾಚಲು ಬಿಜೆಪಿ ಧರ್ಮ ಹಾಗೂ ಇತರೆ ವಿಚಾರಗಳನ್ನು ಭಾವನಾತ್ಮಕವಾಗಿ ತರುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಹಿಂದು ವಿರೋಧಿ ಅಲ್ಲ: ಸ್ವಾಮೀಜಿಗಳ ವಿರುದ್ಧ ಸಿದ್ದರಾಮಯ್ಯ ಮಾತಾಡಿಲ್ಲ. ಸಿದ್ದರಾಮಯ್ಯ ಒಬ್ಬ ಸಾಮಾನ್ಯ ವ್ಯಕ್ತಿ ಅಲ್ಲ. ಲಕ್ಷಾಂತರ ಜನರು ಸಿದ್ದರಾಮಯ್ಯ ಜೊತೆ ಇದ್ದಾರೆ. ಸಿದ್ದರಾಮಯ್ಯ ಹಿಂದೂ ವಿರೋಧಿ ಅಲ್ಲ. ವೀರಶೈವ ಲಿಂಗಾಯತ ಸಮುದಾಯಕ್ಕಾಗಿ ಸಿದ್ದರಾಮಯ್ಯ ಬಹಳಷ್ಟು ಕೆಲಸ ಮಾಡಿದ್ದಾರೆ. ಹಿಜಾಬ್ ವಿಚಾರದಲ್ಲಿ ಬಿಜೆಪಿ ನಾಯಕರು ಚಿಲ್ಲರೆ ಕೆಲಸ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯವನ್ನು ಮಾಡಿದ್ದಾರೆ. ಎಲ್ಲಾ ವರ್ಗಗಳ ಕಲ್ಯಾಣಕ್ಕೆ ಶ್ರಮಿಸಿದ್ದಾರೆ. ಇವರ ವಿಚಾರವಾಗಿ ಅನಗತ್ಯ ವಿವಾದ ಸೃಷ್ಟಿಸುವ ಕಾರ್ಯ ಆಗುತ್ತಿದೆ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಬಸವರಾಜ ಬೊಮ್ಮಾಯಿ ಚಿಲ್ಲರೆ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಯಾವುದೇ ಸ್ವಾಮಿಜಿಗಳಿಗೆ ಅವಮಾನ ಮಾಡಿಲ್ಲ ಎಂದು ಹೇಳಿದರು.