ಕರ್ನಾಟಕ

karnataka

ETV Bharat / state

ಬಿಜೆಪಿ ತೊರೆಯಲ್ಲ, ಗುರುಮಿಠಕಲ್​ಗೆ ನಾನೇ ಅಭ್ಯರ್ಥಿ: ಬಾಬುರಾವ್ ಚಿಂಚನಸೂರ್

ಬಿಜೆಪಿ ತೊರೆದು ಕಾಂಗ್ರೆಸ್​ ಸೇರಲ್ಲ ಎಂದ ಬಾಬುರಾವ್ ಚಿಂಚನಸೂರ್- ತೊಡೆ ತಟ್ಟಿ ಪ್ರಿಯಾಂಕ್ ಖರ್ಗೆ ಸೋಲಿಸುತ್ತೇನೆ ಎಂದ ಮಾಜಿ ಸಚಿವ- ಗುರುಮಿಠಕಲ್​ ಅಭ್ಯರ್ಥಿಯಾಗಿ ಚಿಂಚನಸೂರ್ ಸ್ಪರ್ಧೆ

baburao
ಬಾಬುರಾವ್ ಚಿಂಚನಸೂರ್

By

Published : Feb 14, 2023, 1:11 PM IST

Updated : Feb 14, 2023, 2:05 PM IST

ಬಿಜೆಪಿ ತೊರೆಯಲ್ಲ, ಗುರುಮಿಠಕಲ್​ಗೆ ನಾನೇ ಅಭ್ಯರ್ಥಿ: ಬಾಬುರಾವ್ ಚಿಂಚನಸೂರ್

ಬೆಂಗಳೂರು: "ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತೇನೆ ಎನ್ನುವುದು ಕೇವಲ ವದಂತಿಯಷ್ಟೇ. ಯಾವುದೇ ಕಾರಣಕ್ಕೂ ನಾನು ಬಿಜೆಪಿ ತೊರೆಯಲ್ಲ, ಬಿಜೆಪಿಯಲ್ಲಿಯೇ ಇರುತ್ತೇನೆ, ಬಿಜೆಪಿಯಲ್ಲಿಯೇ ಸಾಯುತ್ತೇನೆ" ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಸ್ಪಷ್ಟಪಡಿಸಿದ್ದು, "ಗುರುಮಿಟ್ಕಲ್ ಕ್ಷೇತ್ರದಿಂದ ನಾನೇ ಬಿಜೆಪಿ ಅಭ್ಯರ್ಥಿ, ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದಂತೆ ಈ ಬಾರಿ ಅವರ ಪುತ್ರ ಪ್ರಿಯಾಂಕ್ ಖರ್ಗೆಯನ್ನು ಸೋಲಿಸುತ್ತೇನೆ" ಎಂದು ತೊಡೆ ತಟ್ಟಿ ಹೇಳಿದರು.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಮೆಚ್ಚುವ ಕೆಲಸ ಮಾಡುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಪ್ರಧಾನಿಯವರು ಜಗತ್ತಿನ ನಾಯಕ. ಅವರ ನೇತೃತ್ವದಲ್ಲಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್ ಕಟೀಲ್, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರದ ಕೋಲಿ ಸಮಾಜದ ನಾಯಕಿ ಜ್ಯೋತಿ ಮತ್ತು ನಾಯಕ ರವಿಕುಮಾರ್ ನೇತೃತ್ವದಲ್ಲಿ ರಾಜ್ಯದಲ್ಲಿ ಉತ್ತಮ ಕೆಲಸ ಮಾಡಲಾಗುತ್ತಿದೆ. ಬಿಜೆಪಿ ಪಕ್ಷವು ನನಗೆ ತಾಯಿ ಇದ್ದಂತೆ, ನಾನೆಂದೂ ದ್ರೋಹ ಮಾಡುವುದಿಲ್ಲ. ಬಿಜೆಪಿಗೆ ದ್ರೋಹ ಮಾಡಿದರೆ ನಾನು ತಾಯಿಗೆ ಮೋಸ ಮಾಡಿದಂತೆ" ಎಂದರು.

"ಕಲ್ಯಾಣ ಕರ್ನಾಟಕದಲ್ಲಿ 43 ಸೀಟ್​ಗಳಿದ್ದು, ಪಕ್ಷವು ಹೆಚ್ಚು ಸ್ಥಾನದಲ್ಲಿ ಗೆಲ್ಲಲಿದೆ. ಮುಂದಿನ ದಿನದಲ್ಲಿ ಬಿಜೆಪಿ ಶಕ್ತಿ ಏನೆಂಬುದು ಗೊತ್ತಾಗಲಿದೆ. ಎಲ್ಲಿ ನೋಡಿದರೂ ಮೋದಿ ಎಂಬ ಜಯಘೋಷವೇ ಕೇಳುತ್ತಿದೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ನನ್ನ ಶಕ್ತಿ ಸಾಮರ್ಥ್ಯ ಗೊತ್ತಾಗಲಿದೆ. ಕಲ್ಯಾಣ ಕರ್ನಾಟಕದಲ್ಲಿ ನಾನು ಮತ್ತೆ ರವಿಕುಮಾರ್ ಓಡಾಡಲಿದ್ದೇವೆ. ನನಗೆ ಪಕ್ಷದ ಮೇಲೆ ಯಾವುದೇ ಮುನಿಸಿಲ್ಲ. ಕಾಂಗ್ರೆಸ್‌ಗೆ ಹೋಗುತ್ತೇನೆ ಅನ್ನುವ ವದಂತಿ ಕೇಳಿಬಂತು. ಮಗ ಮುನಿಸಿಕೊಂಡು ಹೋದರೆ ತಾಯಿ ಕರೀತಾಳೆ. ಹಾಗೆಯೇ ನಾನು ಕಾಂಗ್ರೆಸ್ ಹೋಗೋದು ಸುಳ್ಳು. ಬಿಜೆಪಿಯಲ್ಲೇ ಇರುತ್ತೇನೆ, ಬಿಜೆಪಿಯಲ್ಲೇ ಸಾಯುತ್ತೇನೆ. ಗುರುಮಿಠಕಲ್​ಗೆ ನಾನೇ ಬಿಜೆಪಿ ಅಭ್ಯರ್ಥಿಯಾಗಿ ಗೆಲ್ಲುತ್ತೇನೆ. ಮತದಾರರಲ್ಲಿ ಗೊಂದಲ ಬೇಡ" ಎಂದು ತಿಳಿಸಿದರು.

ಇದನ್ನೂ ಓದಿ:ಕಾಂಗ್ರೆಸ್ ಲಿಂಗಾಯತ ಮುಖಂಡರ ಸಭೆ; ಹೆಚ್ಚಿನ ಟಿಕೆಟ್​ ನೀಡುವಂತೆ ಬೇಡಿಕೆ

'ಪಕ್ಷದಲ್ಲಿ ಟಿಕೆಟ್ ನೀಡಲು ವಯಸ್ಸು ಅಡ್ಡಿ ಬರಲ್ವಾ?' ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ನನ್ನ ವಯಸ್ಸು ನಿಮಗೆ ಗೊತ್ತಿಲ್ಲ. ನಾನು ಮದುವೆ ಗಂಡು ಇದ್ದ ಹಾಗೆ ಇದ್ದೀನಿ. ವಯಸ್ಸಾದಷ್ಟು ಅನುಭವ ಜಾಸ್ತಿ ಆಗಿದೆ" ಎಂದು ಹಾಸ್ಯ ಚಟಾಕಿ ಹಾರಿಸಿದರು. ಬಳಿಕ ಪ್ರಿಯಾಂಕ್ ಖರ್ಗೆ ವಿರುದ್ಧ ತೊಡೆ ತಟ್ಟಿದ ಬಾಬುರಾವ್ ಚಿಂಚನಸೂರ್, "ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೊಡೆ ತಟ್ಟಿದ್ದೆ. ಲೋಕಸಭಾ ಚುನಾವಣೆಯಲ್ಲಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಇದೀಗ 2023ರ ಕಲ್ಯಾಣ ಕರ್ನಾಟಕದಲ್ಲಿ ಪ್ರಿಯಾಂಕ್ ಖರ್ಗೆಯನ್ನು ಸೋಲಿಸುತ್ತೇನೆ" ಎಂದು ಸವಾಲು ಹಾಕಿದರು.

ನಂತರದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, "ಮಲ್ಲಿಕಾರ್ಜುನ ಖರ್ಗೆ ಅವರು ಯಾಕೆ ಸೋತ್ರು? ಖರ್ಗೆ ಸೋಲಿನಿಂದ ಕಾಂಗ್ರೆಸ್ ಪಾರ್ಟಿ ಹತಾಶೆಗೆ ಒಳಗಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಬಹಳ ದೊಡ್ಡ ನಾಯಕ ಬಾಬುರಾವ್ ಚಿಂಚನಸೂರ್ ಅವರು ಐದು ಬಾರಿ ಗೆದ್ದಿದ್ದಾರೆ. ಅವರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡಿರುವುದು ಹೌದು. ಇವರನ್ನು ಕರೆಸಿಕೊಂಡರೇ ಪಕ್ಷ ಬಲಿಷ್ಠ ಆಗುತ್ತದೆ ಎಂದು ಕಾಂಗ್ರೆಸ್ ಪ್ಲಾನ್ ಮಾಡಿದೆ. ಅದಕ್ಕಾಗಿಯೇ ಕಾಂಗ್ರೆಸ್ಸಿಗರ ಕಡೆಯಿಂದ ಇವರಿಗೆ ಒತ್ತಡವೂ ಬಂದಿತ್ತು, ಜೊತೆಗೆ ಇವರನ್ನು ಸಂಪರ್ಕ ಮಾಡಿದ್ದರು. ಆದರೆ ತಾಯಿ ಪಕ್ಷ ಬಿಜೆಪಿ ಬಿಡಲ್ಲ ಅಂತ ಇವರೇ ಸ್ಪಷ್ಟನೆ ನೀಡಿದ್ದಾರೆ. ಅದೇ ರೀತಿ ಪ್ರಿಯಾಂಕ ಖರ್ಗೆ ಅವರನ್ನು ಈ ಬಾರಿ ಸೋಲಿಸುವ ಜೊತೆಗೆ, ಕಲ್ಯಾಣ ಕರ್ನಾಟಕದ 43 ಕ್ಷೇತ್ರವನ್ನು ಬಿಜೆಪಿ ಗೆಲ್ಲುತ್ತದೆ" ಎಂದರು.

ಇದನ್ನೂ ಓದಿ:ಜನರು ಕೃಷ್ಣದೇವರಾಯನ ಆರಾಧಿಸ್ತಾರೆ, ಟಿಪ್ಪುವಿನ್ನಲ್ಲ: ನಳೀನ್​ ಕುಮಾರ್​ ಕಟೀಲ್​

Last Updated : Feb 14, 2023, 2:05 PM IST

ABOUT THE AUTHOR

...view details