ನೆಲಮಂಗಲ:ಮಾಜಿ ಸಚಿವ ಅಂಜನಮೂರ್ತಿ (78) ವಿಧಿವಶರಾಗಿದ್ದಾರೆ. ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಇವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ಬೆಳಗಿನ ಜಾವ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.
ನೆಲಮಂಗಲದ ಇಂದಿರಾನಗರದಲ್ಲಿ ವಾಸವಾಗಿದ್ದ ಅಂಜನಮೂರ್ತಿ 3 ಬಾರಿ ಕಾಂಗ್ರೆಸ್ನಿಂದ ಸ್ಫರ್ಧಿಸಿ ಶಾಸಕರಾಗಿ ಮತ್ತು ವಸತಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯೂ ಆಗಿದ್ದರು.
ಕೆಲವು ದಿನಗಳ ಹಿಂದೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದರು. ಎರಡು ದಿನಗಳ ಹಿಂದೆ ಮತ್ತೆ ಆರೋಗ್ಯ ಸಮಸ್ಯೆ ಕಾಣಿಸಕೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂಜನಮೂರ್ತಿ ಅವರ ಪಾರ್ಥಿವ ಶರೀರವನ್ನು ನೆಲಮಂಗಲದ ಇಂದಿರಾನಗರದ ಮನೆಗೆ ತರಲಾಗಿದೆ. ಬಂಧು-ಮಿತ್ರರು ಮತ್ತು ಪಕ್ಷದ ಕಾರ್ಯಕರ್ತರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಅಂಜನಮೂರ್ತಿ ಹಿನ್ನೆಲೆ:ಏಪ್ರಿಲ್ 10, 1941ರಂದು ಜನಿಸಿದ್ದ ಅಂಜನಮೂರ್ತಿ ಶಾಸಕರಾಗಿ ನೆಲಮಂಗಲ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1989 - 1994, 1999 - 2004, 2004-2007 ಮೂರು ಅವಧಿಗೆ ಆಯ್ಕೆಯಾಗಿದ್ದರು. ಫೆಬ್ರವರಿ 1993 ರಿಂದ ಡಿಸೆಂಬರ್ 1994ರವರೆಗೆ ವಿಧಾನಸಭೆಯ ಉಪಸಭಾಪತಿಯಾಗಿಯೂ ಸೇವೆ ಸಲ್ಲಿಸಿದ್ದರು. 2003 ರಿಂದ 2004 ಎಸ್ಸಿ ಮತ್ತು ಎಸ್ಟಿ ಆಯೋಗದ ಮುಖ್ಯಸ್ಥರಾಗಿದ್ದರು. 2005 ರಿಂದ 2006 ಅವಧಿಯಲ್ಲಿ ವಸತಿ ಸಚಿವರು ಆಗಿ ಬಡ್ತಿ ಪಡೆದಿದ್ದರು.