ಬೆಂಗಳೂರು:ನವೀನ್ ಹಾಕಿದ್ದ ಫೇಸ್ ಬುಕ್ ಪೋಸ್ಟ್ ಬಂಡವಾಳವಾಗಿಟ್ಟುಕೊಂಡೇ ಕಾರ್ಪೋರೇಟರ್ಗಳಿಬ್ಬರು ಗಲಭೆಗೆ ಕೈವಾಡ ನಡೆಸಿದ್ದರು ಎಂಬ ಶಂಕೆ ಹಿನ್ನೆಲೆ ಸಿಸಿಬಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಅಖಂಡ ಶ್ರೀನಿವಾಸ್ ಅವರ ರಾಜಕೀಯಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದ ಕೆಲ ನಾಯಕರು ಈಗ ಸಿಸಿಬಿ ಖೆಡ್ಡಾಕ್ಕೆ ಬಿದ್ದಿದ್ದು, ತನಿಖಾಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಸದ್ಯ ಮಾಜಿ ಮೇಯರ್ ಸಂಪತ್ ರಾಜ್ ಅವರ ಪಿಎ ಅರುಣನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಪಿಎ ವಶಕ್ಕೆ ಪಡೆದ ಕಾರಣ ಸಂಪತ್ ರಾಜ್ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಯಾಕೆ ಎಂದರೆ, ಗಲಭೆ ನಡೆದ ಪ್ರಮುಖ ಆರೋಪಿಗಳ ಜೊತೆ ಅರುಣ್ ನಿರಂತರ ಸಂಪರ್ಕದಲ್ಲಿದ್ದ ಎನ್ನುವುದು ತಾಂತ್ರಿಕ ಸಾಕ್ಷ್ಯಾಧಾರಗಳಿಂದ ಸಾಬೀತಾಗಿದೆ. ಸದ್ಯ ಅರುಣ್ ಬಳಿಯಿಂದ ಪ್ರತಿಯೊಂದು ಮಾಹಿತಿಯನ್ನು ಸಿಸಿಬಿ ಪೊಲೀಸರು ಕಲೆ ಹಾಕ್ತಿದ್ದಾರೆ. ಹಾಗೆ ಅರುಣ್ ಯಾರಿಗೆ ಕರೆ ಮಾಡಿದ್ದ, ಯಾರಿಗೆ ಮೆಸೇಜ್ ಹಾಕಿದ್ದ ಎಂಬ ಆಧಾರದ ಮೇಲೆ ಸಿಸಿಬಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಈತ ಸಂಪತ್ ರಾಜ್ ಅವರ ಪರ್ಸನಲ್ ಪಿಎ ಆಗಿದ್ದಾನೆ. ಹಾಗೆ ಸಂಬಂಧಿಕ ಕೂಡಾ ಹೌದು. ಅರುಣ್, ಪ್ರಕರಣದ ಪ್ರಮುಖ ಆರೋಪಿ ಮುಜಾಮಿಲ್ ಪಾಷಾ ಹಾಗೂ ಇತರ ಆರೋಪಿಗಳ ಜೊತೆ ಸಂಪರ್ಕ ಹೊಂದಿದ್ದ ಎಂಬ ಅಂಶ ಬಯಲಾಗಿದೆ.
ಅರುಣನನ್ನು ಬಂಧಿಸಿರುವ ಸಿಸಿಬಿ ಇಂದು ವಿಡಿಯೋ ಕಾನ್ಫರೆನ್ಸ್ ಮುಖಾಂತರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದೆ. ನಿನ್ನೆ ರಾತ್ರಿ ಪುಲಕೇಶಿನಗರದ ಬಳಿ ಅರುಣ್ನನ್ನು ವಶಕ್ಕೆ ಪಡೆಯಲಾಗಿತ್ತು. ತನಿಖೆಯಲ್ಲಿ ಅರುಣ್ ಪಾತ್ರ ಇರುವ ಕಾರಣ ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅರುಣ್ ಬಳಿ ಇದ್ದ ಮೊಬೈಲ್ ಹಾಗೇ ಲ್ಯಾಪ್‌ಟಾಪ್ ಕೂಡಾ ವಶಕ್ಕೆ ಪಡೆಯಲಾಗಿದೆ. ಸದ್ಯ ಅರುಣ್ ಮೊಬೈಲ್ ನಿಂದ ಯಾರಿಗೆಲ್ಲಾ ಕರೆ ಹೋಗಿದೆ. ಮಾಜಿ ಮೇಯರ್ ಸಂಪತ್ ಏನಾದ್ರು ಮಾತನಾಡಿದ್ದಾರಾ ಎನ್ನುವ ಬಗ್ಗೆಯೂ ತನಿಖೆ ನಡೆಯುತ್ತಿದೆ.