ಬೆಂಗಳೂರು:ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಯಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಧ್ವಂಸ ಪ್ರಕರಣದ ಪ್ರಮುಖ ಆರೋಪಿ ಸಂಪತ್ ರಾಜ್ ಬಂಧನವಾಗಿದೆ. ತಲೆಮರೆಸಿಕೊಂಡು ಓಡಾಡುತ್ತಿದ್ದ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಮಾಜಿ ಮೇಯರ್ ಸಂಪತ್ ರಾಜ್ ಬಂಧನ ಈಗ ಸಿಸಿಬಿ ಬಲೆಯಲ್ಲಿರುವ ಸಂಪತ್ ರಾಜ್ ಆಟ ಸಾಮಾನ್ಯವಾದುದ್ದೇನಲ್ಲ. ಸಿಸಿಬಿ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ರಾಜ್ ಓಡಾಡಿದ ಪರಿ ಮಾತ್ರ ರಣರೋಚಕ. ಕೆಜಿ ಹಳ್ಳಿ ಡಿಜೆ ಹಳ್ಳಿ ಗಲಭೆಯಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ದ್ವಂಸ ಪ್ರಕರಣದಲ್ಲಿ ಪ್ರಮುಖ ಅರೋಪಿ ಈ ಸಂಪತ್ ರಾಜ್. ಹೇಳಿ ಕೇಳಿ ಬೆಂಗಳೂರಿನ ಮಾಜಿ ಮೇಯರ್ ಬೇರೆ. ಈಗ ಸಿಸಿಬಿ ಕೈಯಲ್ಲಿ ಸಿಲುಕಿ ವಿಲವಿಲ ಒದ್ದಾಡುತ್ತಿದ್ದಾರೆ. ಆದರೆ ಕಳೆದೊಂದು ತಿಂಗಳಿನಿಂದ ಸಂಪತ್ ರಾಜ್ ಆಟಾಟೋಪ ಖಾಕಿ ಪಡೆಗೆ ತಲೆ ಬಿಸಿಯಾಗಿತ್ತು.
ಸಂಪತ್ ರಾಜ್ ಹೈಡ್ರಾಮಾ ಹೇಗಿತ್ತು ಗೊತ್ತಾ?
14/09/2020
ಮೊದಲ ಬಾರಿಗೆ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲು
3/10/2020
ಈ ದಿನದಂದು ಸಂಪತ್ ರಾಜ್ ಆಸ್ಪತ್ರೆಯಿಂದ ಡಿಸ್ಚಾರ್ಜ್
4/10/2020
ಎರಡನೇ ಬಾರಿಗೆ ಆಸ್ಪತ್ರೆ ಸೇರಿದ ಸಂಪತ್ ರಾಜ್
14/10/2020
ಎರಡನೇ ಬಾರಿ ಸಂಪತ್ ರಾಜ್ ಡಿಸ್ಚಾರ್ಜ್ ಆಗಿ ಜಾಮೀನು ಅರ್ಜಿ ಸಲ್ಲಿಸಿದ್ದರು
16/10/2020
ಜಾಮೀನು ಅರ್ಜಿ ತಿರಸ್ಕೃತವಾದ ಕಾರಣ ಮತ್ತೆ ಆಸ್ಪತ್ರೆಗೆ ದಾಖಲು
17/10/2020
ಸಂಪತ್ ರಾಜ್ ಡಿಸ್ಚಾರ್ಜ್ ಬಗ್ಗೆ ಮಾಹಿತಿ ಕೋರಿ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ನೋಟಿಸ್ ಕೊಟ್ಟ ಸಿಸಿಬಿ
23/10/2020
ಡಿಸ್ಚಾರ್ಜ್ ಬಳಿಕ ತಲೆಮರೆಸಿಕೊಂಡ ಸಂಪತ್ ರಾಜ್
ಹೀಗೆ ನಾಲ್ಕೈದು ಬಾರಿ ಕೊರೊನಾ ನೆಪವೊಡ್ಡಿ ಹೈಡ್ರಾಮಾ ಆಡಿದ್ದ ಸಂಪತ್ ರಾಜ್, ಕೊನೆಗೆ ಹೈಕೋರ್ಟ್ಗೆ ಪುನಃ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದ್ರೆ ಮುಖ್ಯನ್ಯಾಯಮೂರ್ತಿ ಓಕಾ ಅವರ ವಿಭಾಗೀಯ ಪೀಠ ಜಾಮೀನು ಅರ್ಜಿ ತಿರಸ್ಕರಿಸಿತ್ತು. ಅಲ್ಲದೆ ಈ ಪ್ರಕರಣ ಸಂಬಂಧ ಸಿಸಿಬಿ ತನಿಖಾಧಿಕಾರಿಗಳನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಹೀಗಾಗಿ ತಮ್ಮ ತನಿಖೆಯ ವೇಗ ಹೆಚ್ಚಿಸಿದ ಸಿಸಿಬಿ ಅಧಿಕಾರಿಗಳು ಕೊನೆಗೂ ಈಗ ಸಂಪತ್ ರಾಜ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮಧ್ಯೆ ಸಿಸಿಬಿ ಅಧಿಕಾರಿಗಳು 50 ಪುಟಗಳ ಮಧ್ಯಂತರ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದರು.
ಇಷ್ಟು ದಿನ ಖಾಕಿ ಕಣ್ಣಿಗೆ ಬೀಳದ ಸಂಪತ್ ರಾಜ್ ಅಡಗಿ ಕೂತಿದ್ದು ಎಲ್ಲಿ ಅನ್ನೋದು ಕುತೂಹಲದ ಪ್ರಶ್ನೆ. ಆದರೆ ಸಿಸಿಬಿ ಮೂಲಗಳ ಪ್ರಕಾರ, ಇವರು ತಮಿಳುನಾಡು, ಕೇರಳ ಹಾಗೂ ರಾಜ್ಯದ ಹಲವು ಭಾಗಗಳಲ್ಲಿ ಅಡಗಿದ್ದರಂತೆ. ಐನಾತಿ ನಿಲುವು ಅಂದರೆ ಒಂದು ಕಡೆ ಎರಡು ದಿನಕ್ಕಿಂತ ಹೆಚ್ಚು ಎಲ್ಲಿಯೂ ಉಳಿಯುತ್ತಿರಲಿಲ್ಲ. ಇದರಿಂದ ಸಿಸಿಬಿ ಅಧಿಕಾರಿಗಳಿಗೆ ಬಂಧಿಸೋಕೆ ಸಾಧ್ಯ ಆಗಿರಲಿಲ್ಲವಂತೆ.
ನಿನ್ನೆ ಬೆಂಗಳೂರಿನ ಬೆನ್ಸನ್ ಟೌನ್ ಬಳಿಯ ತನ್ನ ಸ್ನೇಹಿತನ ನಿವಾಸಕ್ಕೆ ಬಂದಿದ್ದ ವೇಳೆ ಸಿಸಿಬಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಇದೇ ಕೊನೆಯ ಅವಕಾಶ, ಇದು ಮಿಸ್ ಆದ್ರೆ ಮತ್ತೊಮ್ಮೆ ನ್ಯಾಯಪೀಠದಿಂದ ಛೀಮಾರಿ ಹಾಕಿಸಿಕೊಳ್ಳಬೇಕೆಂಬ ವಿಚಾರ ಅರಿತ ಸಿಸಿಬಿ ಅಧಿಕಾರಿಗಳು ಹರಸಾಹಸ ಪಟ್ಟು ಬಂಧಿಸಿದ್ದಾರೆ. ಸದ್ಯ ಸಿಸಿಬಿ ವಶದಲ್ಲಿರುವ ಸಂಪತ್ ರಾಜ್ ಅವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ.