ಬೆಂಗಳೂರು: ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಪ್ರಕಾರ ಸ್ಥಳಿಯ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು. ಆದರೆ ಕಾಲಕಾಲಕ್ಕೆ ಚುನಾವಣೆ ನಡೆಸದೆ, ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಸರ್ಕಾರ ತನಗೆ ಬೇಕಾದ ಹಾಗೆ ಮಾಡಿಕೊಂಡು ಹೋಗುವ ಚಿಂತನೆಯಲ್ಲಿದೆ. ಆದರೆ ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಮಾಜಿ ಮೇಯರ್ ಹಾಗೂ ವಿಧಾನ ಪರಿಷತ್ ಸದಸ್ಯ ಪಿ.ಆರ್. ರಮೇಶ್ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ.
ಬಿಬಿಎಂಪಿಯ ಪ್ರಸ್ತುತ ಕೌನ್ಸಿಲ್ ಅವಧಿ ಸೆಪ್ಟೆಂಬರ್ 10ಕ್ಕೆ ಕೊನೆಗೊಳ್ಳಲಿದೆ. ಈಗಾಗಲೇ ಕೋವಿಡ್ ಕೆಲಸಗಳು ಇರುವ ಹಿನ್ನೆಲೆ 5 ವರ್ಷ ಪೂರ್ಣಗೊಂಡರೂ ಅಧಿಕಾರ ವಿಸ್ತರಣೆ ಮಾಡಿ ಎಂದು ಪಾಲಿಕೆ ಸದಸ್ಯರು ಸರ್ಕಾರದ ಬಳಿ ಮನವಿ ಮಾಡಿದ್ದಾರೆ. ಆದರೆ ಕಾನೂನಿನಲ್ಲಿ ಅವಕಾಶ ಇರದ ಹಿನ್ನೆಲೆ ಹಾಗೂ ಚುನಾವಣಾ ಸಿದ್ಧತೆಗಳು ಪೂರ್ಣಗೊಳ್ಳದ ಹಿನ್ನೆಲೆ ಸರ್ಕಾರ ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ, 198 ವಾರ್ಡಗಳಲ್ಲೂ ಅಧಿಕಾರಿಗಳೇ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಈ ಬಾರಿ 2011ರ ಜನಗಣತಿಯಂತೆ ಮತದಾರರ ಪಟ್ಟಿ ಸಿದ್ಧವಾಗಬೇಕು ಹಾಗೂ ವಾರ್ಡ್ ಮರುವಿಂಗಡಣೆ ಮಾಡಿರುವುದರಿಂದ ಮತದಾರರ ಪಟ್ಟಿ, ಮತಗಟ್ಟೆಗಳ ವ್ಯಾಪ್ತಿ ಬದಲಾಗಲಿದೆ. ಈ ಎಲ್ಲಾ ಸಿದ್ಧತೆಗಳು ನವೆಂಬರ್ 30ಕ್ಕೆ ಸಂಪೂರ್ಣವಾಗಲಿದೆ ಎಂದು ಈಗಾಗಲೇ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ.
ಹೀಗಾಗಿ ಕೋವಿಡ್ ಸಂಕಷ್ಟ ಮುಗಿದರೂ, ಇಲ್ಲದಿದ್ದರೂ ನವೆಂಬರ್ವರೆಗೆ ಆಡಳಿತಾಧಿಕಾರಿಗಳ ದರ್ಬಾರ್ ಪಕ್ಕಾ ಆಗಿದೆ. ಹಿರಿಯ ಐಎಎಸ್ ಅಧಿಕಾರಿ ಮಹೇಂದ್ರ ಜೈನ್ ಅವರೇ ಆಡಳಿತಾಧಿಕಾರಿಯಾಗಲಿದ್ದಾರೆ ಎಂಬ ಮಾತು ಪಾಲಿಕೆ ವಲಯದಲ್ಲಿ ಕೇಳಿ ಬಂದಿದೆ.
ಆದರೆ ಸರ್ಕಾರದ ವರ್ತನೆ ನೋಡಿದರೆ, ಯಾವುದೇ ಕಾರಣಕ್ಕೂ ಚುನಾವಣೆ ಮಾಡದೆ ಮುಂದೂಡುವ ಯೋಚನೆಯಲ್ಲಿದೆ. ಆದರೆ ಇದು ಸಂವಿಧಾನ ವಿರೋಧಿಯಾಗಿದೆ. 2006 ರಲ್ಲಿಯೂ ಚುನಾವಣೆ ಮಾಡಬೇಕಿತ್ತು. ಆದರೆ ರಾಜ್ಯ ಸರ್ಕಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಆಡಳಿತ ಇದ್ದಾಗ 2006 ರಿಂದ 2010ರ ವರೆಗೆ ಚುನಾವಣೆ ಮುಂದೂಡಿಕೆಯಾಗಿತ್ತು. ಮೂರೂವರೆ ವರ್ಷಗಳ ಕಾಲ ಚುನಾವಣೆ ಇಲ್ಲದೆ ಆಡಳಿತಾಧಿಕಾರಿಗಳನ್ನು ಇಟ್ಟುಕೊಂಡು ಆಡಳಿತ ಮಾಡಿತ್ತು. ಕಡೆಗೆ ಕೋರ್ಟ್ನಿಂದ ಆರ್ಡರ್ ತಂದ ಮೇಲೆ ಚುನಾವಣೆ ಮಾಡಿದರು ಎಂದು ಪಿಆರ್ ರಮೇಶ್ ಈಟಿವಿ ಭಾರತ್ಗೆ ತಿಳಿಸಿದರು.
ಪಾಲಿಕೆ ಸದಸ್ಯರ ಅಧಿಕಾರಾವಧಿ ವಿಸ್ತರಣೆ ಅಸಾಧ್ಯ..!
ಪಾಲಿಕೆ ಸದಸ್ಯರ ಅಧಿಕಾರ ಅವಧಿ ಮುಗಿಯುವ ಮೊದಲೇ ಚುನಾವಣೆ ನಡೆಸಬೇಕು ಎಂದು ಸಂವಿಧಾನ ಮತ್ತು ರಾಜ್ಯ ಕಾಯ್ದೆಗಳು ಹೇಳುತ್ತವೆ. ಆದ್ರೆ ಚುನಾವಣೆ ಮಾಡದೇ ಅಧಿಕಾರ ಮುಂದುವರಿಸುವುದು ಸಂವಿಧಾನಕ್ಕೆ ಧಕ್ಕೆಯಾಗುತ್ತದೆ. ಚುನಾವಣೆ ಮುಂದೂಡಲು ಸಹ ಆಗುವುದಿಲ್ಲ. ಇದನ್ನು ಸುಮಾರು ಬಾರಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಎತ್ತಿ ಹಿಡಿದಿವೆ.
ಪಾಲಿಕೆ ಸದಸ್ಯರ ಒತ್ತಡಕ್ಕೆ ಮಣಿದು ಅಧಿಕಾರ ವಿಸ್ತರಣೆ ಮಾಡಿದರೂ, ಅದು ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಎದುರಿಸಬೇಕಾಗುತ್ತದೆ. ಅಧಿಕಾರ ವಿಸ್ತರಣೆ ಹಿಂದೊಮ್ಮೆ 1988ರಲ್ಲಿ ನಡೆದಿದೆ ಎನ್ನಲಾಗುತ್ದೆತಿ. ಆದರೆ ಸಂವಿಧಾನದ 73 ಹಾಗೂ 74ನೇ ತಿದ್ದುಪಡಿಯನ್ನು ಕೇಂದ್ರ ಸರ್ಕಾರ 1992ರಲ್ಲಿ ಜಾರಿಗೆ ತಂದಿತು. 74ನೇ ತಿದ್ದುಪಡಿ ನಗರ ಸ್ಥಳೀಯ ಸಂಸ್ಥೆಗಳಿಗೆ ಅನ್ವಯವಾಗುತ್ತದೆ. ಹೀಗಾಗಿ ಸ್ಥಳೀಯ ಸಂಸ್ಥೆಗಳಿಗೆ ಸಂವಿಧಾನದ ಭದ್ರತೆ ಬಂತು.