ಬೆಂಗಳೂರು: ರಾಜ್ಯದ ಪ್ರವಾಹ ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರ ಎಸ್ಡಿಆರ್ಎಫ್ ನಿಧಿ ಬಳಸಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಲಹೆ ನೀಡಿದ್ದಾರೆ.
ಟ್ವೀಟ್ ಮಾಡಿ ಸಲಹೆ ನೀಡಿರುವ ಅವರು, ರಾಜ್ಯದಲ್ಲಿ ಮೊನ್ನೆ ಸುರಿದ ಮಳೆ ಮತ್ತು ಪ್ರವಾಹಕ್ಕೆ ಒಟ್ಟು 15 ಸಾವಿರ ಕೋಟಿ ರೂ. ಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ, ಆಗಸ್ಟ್‌ವರೆಗಿನ ನಷ್ಟಕ್ಕೆ ಕೇಂದ್ರ ಇನ್ನು ಪರಿಹಾರವೇ ಕೊಟ್ಟಿಲ್ಲ. ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರಕ್ಕೆ ಈಗ ಎಸ್ಡಿಆರ್ಎಫ್ ನಿಧಿಯೇ ಅನಿವಾರ್ಯ. ಹಾಗಾಗಿ ಎಸ್ಡಿಆರ್ಎಫ್ ನಲ್ಲಿ ಇನ್ನೂ ಹಣ ಎಷ್ಟಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಲಿ ಎಂದು ಒತ್ತಾಯಿಸಿದ್ದಾರೆ.
ಕೋವಿಡ್ ನಿರ್ವಹಣೆಗೂ ಕೆಂದ್ರದಿಂದ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಸಿಕ್ಕಿಲ್ಲ. ನಿಯಮಗಳ ಅನ್ವಯ ಕೋವಿಡ್ ವಿಕೋಪಕ್ಕೂ ಎಸ್ಡಿಆರ್ಎಫ್ ನಿಧಿಯನ್ನೇ ಬಳಸಬೇಕು. ರಾಜ್ಯ ಈಗಾಗಲೇ ಕೋವಿಡ್ ನಿರ್ವಹಣೆಗೆ ಎಸ್ ಡಿ ಆರ್ ಎಫ್ ನಿಧಿ ಖರ್ಚು ಮಾಡಿದೆ. ಹೀಗಿರುವಾಗ ಪ್ರಕೃತಿ ವಿಕೋಪಕ್ಕೆ ತೆಗೆದಿಟ್ಟಿರುವ ಮೊತ್ತವೆಷ್ಟು? ಎನ್ ಡಿ ಆರ್ ಎಫ್ ನಡಿ ಬರಬೇಕಾದ ಪರಿಹಾರವೆಷ್ಟು ಎಂಬ ಮಾಹಿತಿ ನೀಡಲಿ ಎಂದು ಒತ್ತಾಯಿಸಿದ್ದಾರೆ.
ಎಚ್ಡಿಕೆ ವಿರುದ್ಧ ಆಕ್ರೋಶ: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ಎಚ್ಡಿಕೆಯವರು, ಕೇತಗಾನಹಳ್ಳಿ ತೋಟದ ಮನೆಯಲ್ಲಿ ತಾವು ನಡೆಸಿದ ಅಕ್ರಮದ ಬಗ್ಗೆ ಸತ್ಯ ಬಾಯ್ಬಿಟ್ಟಿದ್ದಾರೆ. ಸಿಎಂ ಆಗಿದ್ದ ಮೊದಲ ಅವಧಿಯಲ್ಲಿ, ಪುಟ್ಟಣ್ಣ ಅವರ ಶಿಫಾರಸ್ಸಿನಂತೆ ಕೆಪಿಎಸ್ಸಿ ಮೇಲೆ ಪ್ರಭಾವ ಬೀರಿ 12 ಜನರಿಗೆ ಉಪನ್ಯಾಸಕ ಹುದ್ದೆ ಕೊಡಿಸಿದ್ದಾರೆ. ಪಾರದರ್ಶಕವಾಗಿರಬೇಕಾದ ನೇಮಕಾತಿಯಲ್ಲಿ ಅನರ್ಹರಿಗೆ ಉದ್ಯೋಗ ಕೊಡಿಸಿದ್ದು ಹಗರಣವಲ್ಲವೆ? ಎಂದು ಪ್ರಶ್ನಿಸಿದ್ದಾರೆ.
1999-2000ರ ಅವಧಿಯಲ್ಲಿ ಎಚ್ಡಿಕೆ ಸ್ವಜನ ಪಕ್ಷಪಾತದಿಂದ ವಶೂಲಿಬಾಜಿ ಮಾಡಿ ಗ್ರೂಪ್-ಎ ಹುದ್ದೆಗೆ ನೇಮಕಾತಿ ಮಾಡಿರುವುದು ದೊಡ್ಡ ಅಕ್ರಮ. ಅರ್ಹತೆ ಇಲ್ದದೇ ಉದ್ಯೋಗ ಗಿಟ್ಟಿಸಿಕೊಂಡವರು ಈಗ ಕೆಎಎಸ್ ಅಧಿಕಾರಿಗಳಾಗಿದ್ದಾರೆ. ಈ ಹಗರಣದಲ್ಲಿ ಅಂದಿನ ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಎಚ್ ಎನ್ ಕೃಷ್ಣ, ಪುಟ್ಟಣ್ಣ ಕೂಡ ಪಾಲುದಾರರೇ? ಸರ್ಕಾರ ಈ ಪ್ರಕರಣದ ತನಿಖೆ ನಡೆಸಲೇಬೇಕು ಎಂದು ಒತ್ತಾಯಿಸಿದ್ದಾರೆ.