ಬೆಂಗಳೂರು: ತೈಲ ಬೆಲೆ ಏರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತೀವ್ರ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.
ಕೇಂದ್ರದಲ್ಲಿರುವುದು ಮಾನವೀಯತೆ ಸತ್ತ, ದುಷ್ಟ, ದುರುಳ, ಕ್ರೌರ್ಯದ ಸರ್ಕಾರ. ತೈಲದರ ಇಳಿಸುವುದಿಲ್ಲ ಎಂಬ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿಕೆ ಉದ್ಧಟತನದ್ದು. ಜನಕಲ್ಯಾಣ ಯೋಜನೆಗಾಗಿ ತೈಲ ದರ ಏರಿಸಿ ಜನರನ್ನು ಲೂಟಿ ಮಾಡಬೇಕೆ? ಕಾರ್ಪೊರೇಟ್ ಕಂಪನಿಗಳ 2 ಲಕ್ಷ ಕೋಟಿ ಮನ್ನಾ ಮಾಡಿದ್ಯಾಕೆ? ಆ ಹಣವನ್ನೇ ಜನಕಲ್ಯಾಣ ಯೋಜನೆಗೆ ಬಳಸಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ವಿದೇಶಿ ಬ್ಯಾಂಕ್ಗಳಲ್ಲಿರುವ ಕಪ್ಪು ಹಣ ತಂದು ಜನರ ಅಕೌಂಟ್ಗೆ 15 ಲಕ್ಷ ರೂ ಹಾಕುವುದಾಗಿ ಮೋದಿ ಹೇಳಿದ್ದರು. ಈಗ ಅವರನ್ನು ತಡೆಯುತ್ತಿರುವುದು ಯಾರು? ಆ ಕಪ್ಪು ಹಣ ತರಲಿ. ಆ ಕಪ್ಪು ಹಣವನ್ನೇ ಜನಕಲ್ಯಾಣ ಯೋಜನೆಗೆ ಬಳಸಲಿ. ಜನಕಲ್ಯಾಣ ಯೋಜನೆಗೆ ತೈಲದ ದುಡ್ಡೇ ಬೇಕೆ? ಜನರನ್ನು ಲೂಟಿ ಮಾಡಲು ಜನ ಕಲ್ಯಾಣ ಯೋಜನೆಯ ನೆಪ ಹೇಳುವುದು ನಾಚಿಕೆಗೇಡು ಎಂದು ಹೇಳಿದ್ದಾರೆ.
ಇಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದಿರುವ ಅವರು ಇದೇ ವಿಚಾರವಾಗಿ ಇನ್ನಷ್ಟು ಮಾತನಾಡಲಿದ್ದಾರೆ. ಅಲ್ಲದೇ ಅಂಕಿ ಅಂಶ ಸಮೇತ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಲಿದ್ದಾರೆ.