ಬೆಂಗಳೂರು:ಸುಪ್ರೀಂ ಕೋರ್ಟ್ ನಲ್ಲಿ ಮಹಾರಾಷ್ಟ್ರ ರಾಜ್ಯ ಸರಕಾರ ಕ್ಯಾತೆ ತಗೆದಿರುವ ಬೆಳಗಾವಿ ಗಡಿ ವಿವಾದದ ಅಂತಿಮ ವಿಚಾರಣೆ ನಡೆಯಲು ಮುಹೂರ್ತ ನಿಗದಿಯಾಗುತ್ತಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಹಲವಾರು ತಿಂಗಳುಗಳಿಂದ ಖಾಲಿ ಉಳಿದಿದ್ದ ಗಡಿ ಮತ್ತು ನದಿಗಳ ರಕ್ಷಣಾ ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಸುಪ್ರೀಂ ಕೋರ್ಟ್ ನ ಹಿರಿಯ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ ಪಾಟೀಲ್ ಅವರನ್ನು ರಾಜ್ಯದ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ರಾಜ್ಯ ಸರಕಾರ ಶುಕ್ರವಾರ ನೇಮಿಸಿದೆ. ನ್ಯಾ. ಶಿವರಾಜ ಪಾಟೀಲ್ ಅವರು ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿಯೇ ರಾಜ್ಯದ ಲೋಕಾಯುಕ್ತರಾಗಿಯೂ ಅಲ್ಪ ಅವಧಿಗೆ ಸೇವೆ ಸಲ್ಲಿಸಿದ್ದರು.
ಗಡಿ ಮತ್ತು ನದಿಗಲ ರಕ್ಷಣಾ ಆಯೋಗದ ಅಧ್ಯಕ್ಷರಾಗಿ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಕೆ ಎಲ್ ಮಂಜುನಾಥ್ ನೇಮಕಗೊಂಡಿದ್ದರು. ಅವರ ನಿಧನದ ನಂತರ ಕಳೆದ 10 ತಿಂಗಳಿನಿಂದ ಗಡಿ ಆಯೋಗಕ್ಕೆ ಅಧ್ಯಕ್ಷರ ನೇಮಕ ನಡೆಯದೇ ಹುದ್ದೆ ಖಾಲಿ ಉಳಿದಿತ್ತು.
ಬೆಳಗಾವಿ ಗಡಿವಿವಾದ ಸೇರಿದಂತೆ ರಾಜ್ಯದ ಗಡಿ ವಿವಾದಗಳ ಬಗ್ಗೆ ರಾಜ್ಯ ಸರಕಾರಕ್ಕೆ ಸಲಹೆ ನೀಡಲು ಗಡಿ ಆಯೋಗವನ್ನು 2018 ರ ವೇಳೆಯಲ್ಲಿ ರಚಿಸಲಾಗಿತ್ತು. ಇದಕ್ಕೆ ನ್ಯಾ ಕೆ ಎಲ್ ಮಂಜುನಾಥ್ ಅವರು ಅಧ್ಯಕ್ಷರಾಗಿದ್ದರು. ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ 2004ರಲ್ಲಿ ಸುಪ್ರೀಂ ಕೋರ್ಟ್ ನ ಹಿರಿಯ ವಕೀಲರಾದ ಹೆಚ್ ಬಿ ದಾತಾರ್ ಅವರ ನೇತೃತ್ವಲ್ಲಿ ಗಡಿ ವಿವಾದ ಸಲಹಾ ಸಮಿತಿ ರಚಿಸಲಾಗಿತ್ತು.
ಬರುವ ವಾರ ಬೆಳಗಾವಿ ಗಡಿ ವಿವಾದದ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿಯವರು ಸರ್ವ ಪಕ್ಷಗಳ ಸಭೆ ಕರೆಯಲು ನಿರ್ಧರಿಸಿರುವ ಬೆನ್ನ ಹಿಂದೆಯೇ ವಿರೋಧ ಪಕ್ಷಗಳ ಟೀಕೆಗಳಿಂದ ಪಾರಾಗಲೂ ಸಹ ಕಳೆದ 10 ತಿಂಗಳಿಂದ ಭರ್ತಿಯಾಗದೇ ಖಾಲಿಯುಳಿದಿದ್ದ ಗಡಿ ಮತ್ತು ನದಿಗಳ ರಕ್ಷಣಾ ಆಯೋಗಕ್ಕೆ ಅಧ್ಯಕ್ಷರನ್ನು ರಾಜ್ಯ ಸರಕಾರ ದಿಢೀರನೆ ನೇಮಕ ಮಾಡಿದೆ ಎಂದು ಹೇಳಲಾಗುತ್ತಿದೆ.