ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಮತ್ತೆ ಬಂದರೆ ಈ ಸರ್ಕಾರ ಇರುವುದಿಲ್ಲ. ಇದು ಸರ್ಕಾರಕ್ಕೆ ನೂರು ದಿನಗಳ ಕರಾಳ ದಿನ ಎಂದು ಮಾಜಿ ಸಚಿವ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಆದ ಮೇಲೆ ಈ ಸರ್ಕಾರ ಇರಲ್ಲ ಎಂಬ ಭಯ ಕಾಂಗ್ರೆಸ್ಗೆ ಉಂಟಾಗಿದೆ. ಒಂದೇ ಒಂದು ಅಭಿವೃದ್ಧಿ ಕಾರ್ಯಗಳು ರಾಜ್ಯದಲ್ಲಿ ಆಗುತ್ತಿಲ್ಲ. ನಗರ ಪ್ರದೇಶಗಳಲ್ಲಿ ಕಸ ವಿಲೇವಾರಿ ಆಗಿಲ್ಲ. ಎಲ್ಲ ಕಡೆ ಗುತ್ತಿಗೆದಾರರು ಕೆಲಸ ನಿಲ್ಲಿಸಿದ್ದಾರೆ. ಕಳೆದ ನೂರು ದಿನಗಳಲ್ಲಿ ಅಭಿವೃದ್ಧಿ ಕುಂಠಿತ ಅಲ್ಲ, ಸ್ಥಗಿತ ಆಗಿದೆ. ಕಾಂಗ್ರೆಸ್ಗೆ ಲೋಕಸಭೆ ಚುನಾವಣೆ ನಂತರ ಸರ್ಕಾರ ಉಳಿಯಲ್ಲ ಎಂಬ ಭಯ ಉಂಟಾಗಿದ್ದು, ಮತ್ತೊಮ್ಮೆ ಮೋದಿ ಅವರು ಬಂದರೆ ಈ ಸರ್ಕಾರವೇ ಇರುವುದಿಲ್ಲ ಎಂದು ಹೇಳಿದರು.
ನಮ್ಮ ಆಡಳಿತಾವಧಿಯಲ್ಲಿ ಸರ್ಕಾರ ಎಲ್ಲಿಗೆ ನಿಂತಿತ್ತೋ ಅಲ್ಲೇ ಈ ಸರ್ಕಾರ ನಿಂತಿದೆ. ಹೊಸ ಯೋಜನೆಗಳಿಗೆ ಎಲ್ಲೂ ಚಾಲನೆ ನೀಡಲಾಗಿಲ್ಲ. ಬೆಂಗಳೂರಿನಂತ ನಗರದಲ್ಲೇ ಲೋಡ್ ಶೆಡ್ಡಿಂಗ್, ಉಚಿತ ವಿದ್ಯುತ್ ನೀಡಲು ಲೋಡ್ ಶೆಡ್ಡಿಂಗ್, ಅಭಿವೃದ್ಧಿ ಪರವಾಗಿ ಕಾಂಗ್ರೆಸ್ ನಾಯಕರಿಂದ ಒಂದೇ ಒಂದು ಹೇಳಿಕೆ ಇಲ್ಲ. ರಾಜ್ಯದ ಎಲ್ಲ ಗುತ್ತಿಗೆದಾರರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.