ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ಬೆಂಗಳೂರು:ಇಂದು ಸಂಜೆ 4.30ಕ್ಕೆ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ಎಮ್ಮೆಲ್ಸಿ ಲಕ್ಷ್ಮಣ್ ಸವದಿ ಜತೆ ಸಮಾಲೋಚಿಸಿ ತೆರಳುವ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿ, ಮಾಜಿ ಉಪಮುಖ್ಯಮಂತ್ರಿ, ಬೆಳಗಾವಿಯ ಪ್ರಭಾವಿ ನಾಯಕ ಲಕ್ಷ್ಮಣ ಸವದಿ ಅವರು ಇಂದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಅವರ ನಂತರ ಇನ್ನು ಅನೇಕ ನಾಯಕರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಲಕ್ಷ್ಮಣ್ ಸವದಿ ಹಿರಿಯ ನಾಯಕರು. ಅವರು ಯಾವುದೇ ಷರತ್ತು ಇಲ್ಲದೇ ಪಕ್ಷಕ್ಕೆ ಸೇರುತ್ತಿದ್ದು ನಮ್ಮ ಕುಟುಂಬದ ಸದಸ್ಯರಾಗುತ್ತಿದ್ದಾರೆ. ಅವರು ಪಕ್ಷದ ನಾಯಕತ್ವ, ಸಿದ್ಧಾಂತ ಒಪ್ಪಿ ಪಕ್ಷ ಸೇರುತ್ತಿದ್ದು ಅವರಿಗೆ ಶಕ್ತಿ ತುಂಬುವುದು ನಮ್ಮ ಜವಾಬ್ದಾರಿ. ಇಂದು ಪಕ್ಷದ ನಾಯಕರೆಲ್ಲರೂ ಲಕ್ಷ್ಮಣ ಸವದಿ ಅವರ ಜತೆ ಚರ್ಚೆ ಮಾಡಿದ್ದೇವೆ. ಅವರನ್ನು ಪಕ್ಷದ ಎಲ್ಲಾ ನಾಯಕರು ತುಂಬು ಹೃದಯದ ಸ್ವಾಗತ ಕೋರುತ್ತೇವೆ ಎಂದರು.
ಲಕ್ಷ್ಮಣ ಸವದಿ ಅವರ ಜತೆಗೆ ಇನ್ನು ಅನೇಕ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ಎಲ್ಲರನ್ನೂ ನಾವು ಒಮ್ಮತದಿಂದ ಪಕ್ಷಕ್ಕೆ ಸ್ವಾಗತಿಸುತ್ತೇವೆ. ಸವದಿ ಅವರು ಇಂದು ಸಂಜೆ 4 ಗಂಟೆಗೆ ವಿಧಾನ ಪರಿಷತ್ ಸಭಾಪತಿಗಳನ್ನು ಭೇಟಿ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ 4.30ಕ್ಕೆ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದು ಡಿಕೆಶಿ ತಿಳಿಸಿದರು.
ಲಕ್ಷ್ಮಣ್ ಸವದಿ ಹೇಳಿದ್ದೇನು?: ಲಕ್ಷ್ಮಣ್ ಸವದಿ ಮಾತನಾಡಿ, ನಾನು ಅಥಣಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ನಾನು ಯಾವುದೇ ಬೇಡಿಕೆ ಮುಂದಿಟ್ಟಿಲ್ಲ. ಸರ್ಕಾರ ಅಧಿಕಾರಕ್ಕೆ ಬಂದರೆ ಬಾಕಿ ಉಳಿದಿರುವ ನೀರಾವರಿ ಯೋಜನೆಗೆ ಹಣ ಬಿಡುಗಡೆ ಮಾಡಬೇಕು ಎಂದು ಕೇಳಿದ್ದೇನೆ ಎಂದರು.
ನಾನು ನಾಲ್ಕು ಗಂಟೆಗೆ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. 4.30ಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ. ಕಾಂಗ್ರೆಸ್ ಪಕ್ಷದಿಂದ ನಾನು ಅಥಣಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಸರ್ಕಾರ ಬಂದಾಗ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ, ನೀರಾವರಿ ಯೋಜನೆ ಮುಗಿಸಿಕೊಡಲು ಮನವಿ ಮಾಡಿದ್ದೇನೆ. ನನ್ನ ಹೆಂಡ್ತಿ, ಮಗನಿಗೆ ಯಾರಿಗೂ ನಾನು ಟಿಕೆಟ್ ಕೇಳಿಲ್ಲ. ನನ್ನನ್ನು ಕೇಳಿ ಡಿಸಿಎಂ ಮಾಡಲಿಲ್ಲ. ತೆಗೆಯುವಾಗಲೂ ಹೇಳಲಿಲ್ಲ. ನಾನೇನು ಡಿಸಿಎಂ ಮಾಡಿ ಎಂದು ಕೇಳಿರಲಿಲ್ಲ. ಅವರಾಗಿಯೇ ಕೊಟ್ಟರು, ಅವರಾಗಿಯೇ ಕಿತ್ತುಕೊಂಡರು. ಅವರು ನಡೆಸಿಕೊಂಡ ರೀತಿ ಸರಿಯಿಲ್ಲ ಎಂದರು.
ಕಾಗವಾಡ, ಅಥಣಿ ಕ್ಷೇತ್ರದ ಅಭ್ಯರ್ಥಿ ಗೆಲ್ಲಿಸುವ ಗುರಿ ನೀಡಿದ್ದರು, ಮಾಡಿದ್ದೇನೆ. ಎಮ್ಮೆಲ್ಸಿ ಮಾಡುವಾಗ ನಿಮಗೆ ಟಿಕೆಟ್ ನೀಡುತ್ತೇವೆ. ನಿಮ್ಮ ಎಮ್ಮೆಲ್ಸಿ ಸ್ಥಾನವನ್ನು ಕುಮಟಳ್ಳಿಗೆ ನೀಡುತ್ತೇವೆ. ನೀವು ವಿಧಾನಸಭೆ ಚುನಾವಣೆಗೆ ಅಥಣಿಯಿಂದ ಸ್ಪರ್ಧಿಸಿ. ನಿಮ್ಮನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿ ನಮ್ಮದು ಎಂದು ಬಿಜೆಪಿ ತಿಳಿಸಿತ್ತು. ಆದರೆ ಬಿಜೆಪಿ ಮಾತು ತಪ್ಪಿದೆ ಎಂದರು.
ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ ಲಕ್ಷ್ಮಣ ಸವದಿ..
ನಾನು ಸತೀಶ್ ಜಾರಕಿಹೊಳಿ ಜತೆಯೂ ಮಾತುಕತೆ ನಡೆಸಿದ್ದೇನೆ. ಬಿಜೆಪಿ, ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲುತ್ತೋ ನೋಡೋಣ. ನನ್ನ ಜತೆ ಬಿ.ಎಸ್. ಯಡಿಯೂರಪ್ಪ ಮಾತನಾಡಿಲ್ಲ. ಯಾವುದೇ ಬಿಜೆಪಿ ನಾಯಕರು ನನ್ನ ಜತೆ ಮಾತನಾಡಿಲ್ಲ. ಇಂದು ಸಂಜೆ ಕಾಂಗ್ರೆಸ್ ಸೇರುತ್ತೇನೆ. ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಅನ್ನುವುದನ್ನು ಕಾದು ನೋಡೋಣ ಎಂದರು.
ಯಾರ ಮೇಲೂ ನಾನು ಆರೋಪ ಮಾಡಲ್ಲ. ಮೇ 13ಕ್ಕೆ ಜನ ಉತ್ತರಿಸುತ್ತಾರೆ. ನನ್ನನ್ನು ಒಂದು ತಪ್ಪಲ ಅಂತ ರಮೇಶ್ ಜಾರಕಿಹೊಳಿ ಹೇಳಿದ್ದರು. ಅದಕ್ಕೆ ಉತ್ತರ ಸಿಗಲಿದೆ. ನನಗೆ ವಚನ ಕೊಟ್ಟಿದ್ದರು. ಆದರೆ ಯಾಕೆ ಉಳಿಸಿಕೊಳ್ಳಲಿಲ್ಲ ಅಂತ ಬಿಜೆಪಿಯವರು ಉತ್ತರಿಸಬೇಕು. ಮಾನದಂಡ ಅಂದರೆ ಇಡೀ ರಾಜ್ಯಕ್ಕೆ ಒಂದೇ ಇರಬೇಕಿತ್ತು. ಶಂಕರ್, ನಾಗೇಶ್, ಲಕ್ಷ್ಮಣ್ ಸವದಿಗೆ ಒಂದು ಸ್ಟ್ಯಾಂಡ್ ಇದೆಯಾ?.. ನಾನು ಅಥಣಿ ಕ್ಷೇತ್ರವನ್ನೇ ಕೇಳಿದ್ದೆ. ಅದನ್ನು ನೀಡದಿದ್ದರೆ ಪಕ್ಷ ಬಿಡುತ್ತೇನೆ ಎಂದಿದ್ದೆ. ಕೊಟ್ಟಿಲ್ಲ.. ಪಕ್ಷ ಬಿಡುತ್ತಿದ್ದೇನೆ.. ಸಂಜೆ 4.30ಕ್ಕೆ ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳಿದರು.
ನಾನು ಯಾವುದೇ ಜಾರಿಗೆ ಸೇರಿದ ನಾಯಕ ಅಲ್ಲ. ಬಿಜೆಪಿ ಬಿಟ್ಟಿದ್ದೇನೆ. ಆ ಮನೆ ಬಿಟ್ಟಿದ್ದೇನೆ. ಆ ಮನೆಯ ಚಿಂತೆ ನನಗೆ ಏಕೆ?. ಬೆಂಬಲಿಗರ ಜತೆ ನಿನ್ನೆ ಸಂಜೆ ಮಾತುಕತೆ ನಡೆಸಿದ್ದೇನೆ. 30 ಸಾವಿರ ಮಂದಿ ಕಾರ್ಯಕರ್ತರು ನಿರ್ಧಾರವನ್ನು ನನಗೆ ಬಿಟ್ಟಿದ್ದಾರೆ. ಯಾವುದೇ ಪಕ್ಷಕ್ಕೆ ಸೇರಲು ನನಗೆ ಸ್ವಾತಂತ್ರ್ಯ ನೀಡಿದ್ದಾರೆ. ಇಂದು ಕಾಂಗ್ರೆಸ್ ಎಲ್ಲಾ ನಾಯಕರ ಜತೆ ಮಾತುಕತೆ ನಡೆಸಿದ್ದೇನೆ. ನನಗೆ ಭರವಸೆ ಸಿಕ್ಕಿದೆ. ಅದರಿಂದ ಕಾಂಗ್ರೆಸ್ ಸೇರುತ್ತಿದ್ದೇನೆ. ನನ್ನೊಂದಿಗೆ ಇನ್ನು ಯಾರು ಬರುತ್ತಾರೆ ಅನ್ನುವುದನ್ನು ಈಗ ಹೇಳಲ್ಲ. ಬಿಜೆಪಿ ಸೋಲಿಸಬೇಕು ಎನ್ನುವುದು ನನ್ನ ಗುರಿ ಅಲ್ಲ. ಕಾಂಗ್ರೆಸ್ ಗೆಲ್ಲಿಸುವುದು ನನ್ನ ಗುರಿ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವುದು ನಮ್ಮ ಗುರಿ. ಅದಕ್ಕಾಗಿ ರಾಜ್ಯದ ವಿವಿಧೆಡೆ ಪ್ರವಾಸ ಮಾಡುತ್ತೇನೆ ಎಂದರು.
ಓದಿ:ಸಂಧಾನಕ್ಕೆ ಬಂದ ರಾಜೇಶ್ ನೇರ್ಲಿರನ್ನು ತರಾಟೆ ತೆಗೆದುಕೊಂಡ ಸವದಿ ಬೆಂಬಲಿಗರು