ಬೆಂಗಳೂರು: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ಮಾಲಾ ಹಾಗೂ ಸೆಲ್ವರಾಜ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾ ಮಾಡಿ ಆದೇಶಿಸಿದೆ.
ಪ್ರಕರಣದಲ್ಲಿ ಜಾಮೀನು ಕೋರಿ ಆರೋಪಿತರಾದ ಮಾಲಾ ಹಾಗೂ ಸೆಲ್ವರಾಜ್ ಅಲಿಯಾಸ್ ಕ್ಯಾಪ್ಟನ್ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ.ಎಂ.ಜಿ.ಉಮಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಕಳೆದ ಜೂನ್ 24 ರಂದು ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ನಡೆದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕಾಟನ್‌ಪೇಟೆ ಠಾಣೆ ಪೊಲೀಸರು ಪೀಟರ್, ಸೂರ್ಯ, ಸ್ಟೀಫನ್, ಪುರುಷೋತ್ತಮ್, ಅಜಯ್, ಅರುಣ್ ಕುಮಾರ್, ಮಾಲಾ, ಸೆಲ್ವರಾಜ್ ಎಂಬುವರನ್ನು ಬಂಧಿಸಿದ್ದರು.
ಈ ಪ್ರಕರಣದಲ್ಲಿ ಜಾಮೀನು ಕೋರಿ ಪ್ರಮುಖ ಆರೋಪಿಗಳಾದ ಮಾಲ(7ನೇ ಆರೋಪಿ) ಹಾಗೂ ಸೆಲ್ವರಾಜ್(ಆರೋಪಿ 8) ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಜಾಮೀನು ನಿರಾಕರಿಸಿದ್ದರಿಂದ ಹೈಕೋರ್ಟ್ ಮೊರೆಹೋಗಿದ್ದರು. ಪ್ರಕರಣದ ತೀವ್ರತೆ ಪರಿಗಣಿಸಿ ಹೈಕೋರ್ಟ್ ಕೂಡ ಜಾಮೀನು ನೀಡಲು ನಿರಾಕರಿಸಿದೆ.