ಬೆಂಗಳೂರು: ಕರ್ನಾಟಕದಲ್ಲಿ ಅಡಿಕೆ ಸಂಶೋಧನಾ ಸಂಸ್ಥೆ ಸ್ಥಾಪನೆ ಮತ್ತು ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗದಿಂದ ಸಂತ್ರಸ್ತ ರೈತರಿಗೆ ಪರಿಹಾರ ನೀಡುವಂತೆ ಕೇಂದ್ರ ಕೃಷಿ, ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಗೆ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ನವದೆಹಲಿ ಪ್ರವಾಸದಲ್ಲಿರುವ ಬಿ.ಎಸ್.ಯಡಿಯೂರಪ್ಪ ಇಂದು ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಸೇರಿದಂತೆ ಮಲೆನಾಡು ಭಾಗದ ಜನಪ್ರತಿನಿಧಿಗಳ ನಿಯೋಗದೊಂದಿಗೆ ಕೇಂದ್ರ ಕೃಷಿ, ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿ ಮಾಡಿದರು. ಕರ್ನಾಟಕದಲ್ಲಿ ಅಡಿಕೆ ಸಂಶೋಧನಾ ಸಂಸ್ಥೆ ಸ್ಥಾಪನೆ ಮತ್ತು ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗದಿಂದ ಸಂತ್ರಸ್ತ ರೈತರಿಗೆ ಪರಿಹಾರ ನೀಡುವ ಕುರಿತಂತೆ ಮಾತುಕತೆ ನಡೆಸಿದರು.
ಅಡಿಕೆ ಬೆಳೆ ಸಮಸ್ಯೆ ಬಗ್ಗೆ ವಿಸ್ತೃತ ಮಾಹಿತಿ: ಈ ವೇಳೆ ಸಮಸ್ಯೆ ಬಗ್ಗೆ ವಿಸ್ತೃತ ಮಾಹಿತಿ ನೀಡಿದ ನಿಯೋಗ ದೇಶದಲ್ಲಿ ಸುಮಾರು 12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತದೆ. ದೇಶದಾದ್ಯಂತ ಸುಮಾರು 12 ಲಕ್ಷ ಟನ್‌ಗಳಷ್ಟು ಉತ್ಪಾದನೆಯೊಂದಿಗೆ ಸುಮಾರು ರೂ. 5400 ಕೋಟಿಗಳ ಮೌಲ್ಯವನ್ನು ಹೊಂದಿದೆ. ಕರ್ನಾಟಕ ರಾಜ್ಯವು ಸುಮಾರು 4,300 ಕೋಟಿ ಮೌಲ್ಯದ ಸುಮಾರು 9.5 ಲಕ್ಷ ಟನ್ ಕೊಡುಗೆ ನೀಡುತ್ತದೆ ಹಾಗೂ ಕರ್ನಾಟಕ ರಾಜ್ಯದಲ್ಲಿ ಸುಮಾರು 50 ಲಕ್ಷ ಜನರಿಗೆ ಅಡಿಕೆ ಬೆಳೆಯು ಜೀವನೋಪಾಯವನ್ನು ಒದಗಿಸುತ್ತಿದೆ ಎಂದು ವಿವರಿಸಿದರು.