ಬೆಂಗಳೂರು: ರಾಷ್ಟದಲ್ಲಿಯೇ ಮಾದರಿ ಸಾಂವಿಧಾನಿಕ ಸಂಸ್ಥೆಯಾಗಿ ಬೇರೆ ರಾಜ್ಯಗಳಿಗೆ ಅನುಕರಣೀಯವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕರ್ನಾಟಕ ಲೋಕಯುಕ್ತ ಸಂಸ್ಥೆಗೆ ಮತ್ತೆ ಶಕ್ತಿ ತುಂಬಲು ಹೈಕೋರ್ಟ್ ತೀರ್ಪು ಬಹಳ ಸಹಕಾರಿಯಾಗಿದ್ದು, ತುಂಬು ಹೃದಯದಿಂದ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ತಿಳಿಸಿದ್ದಾರೆ.
ಎಸಿಬಿ ರದ್ದು ಪಡಿಸಿ ಲೋಕಾಯುಕ್ತ ಸಂಸ್ಥೆಗೆ ಬಲ ನೀಡಿದ ನ್ಯಾಯಾಲಯದ ತೀರ್ಪು ಸ್ವಾಗತಿಸಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಎಸ್ಎಂ ಕೃಷ್ಣ ಅವರು, ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಗಳಾಗಿದ್ದಾಗ ಪ್ರಾರಂಭಗೊಂಡು ನಾನು ಮುಖ್ಯಮಂತ್ರಿಗಳಾಗಿದ್ದಾಗ, ದಿ. ನ್ಯಾಯಮೂರ್ತಿ ಎನ್ ವೆಂಕಟಾಚಲ ಅವರು ಮತ್ತು ನ್ಯಾ. ಸಂತೋಷ ಹೆಗ್ಡೆ ಪರಿಶ್ರಮದಿಂದ ಲೋಕಾಯುಕ್ತ ಸಂಸ್ಥೆ ದೇಶದ ಗಮನ ಸೆಳೆದಿತ್ತು.
ಕಳೆದ ಕೆಲವು ವರ್ಷಗಳ ಹಿಂದೆ ಪರ್ಯಾಯವಾಗಿ ಸ್ಥಾಪಿತವಾದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದಿಂದ ಲೋಕಾಯುಕ್ತ ಸಂಸ್ಥೆ ತನ್ನ ಘನತೆಯನ್ನು ಕಳೆದುಕೊಂಡಿತು. ಎಸಿಬಿಯಂತಹ ಕೃತಕ ಸಂಸ್ಥೆಯ ಜನನದಿಂದ ಜನರು ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡು ನ್ಯಾಯ ದೊರೆಯುವ ವಿಶ್ವಾಸ ಇಲ್ಲದೇ ಹತಾಶರಾಗಿದ್ದರು ಎಂದು ಹೇಳಿದ್ದಾರೆ.
ಕಳೆದ ತಿಂಗಳು ಹೈಕೋರ್ಟ್ ಎಸಿಬಿಯಲ್ಲಿನ ಭ್ರಷ್ಟ ವ್ಯವಸ್ಥೆ ಬಗ್ಗೆ ಬಲವಾದ ಛಾಟಿ ಬೀಸಿ ಗಮನ ಸೆಳೆದಿದ್ದು ಜನರ ಸೃತಿ ಪಟಲದಲ್ಲಿ ಇದೆ. ಹೈಕೋರ್ಟ್ ತೀರ್ಪುನಿಂದ ಮತ್ತೆ ಜನರ ದೃಷ್ಟಿ ಲೋಕಾಯುಕ್ತ ಸಂಸ್ಥೆ ಮೇಲೆ ನೆಟ್ಟಿದೆ. ನ್ಯಾಯಾಲಯದ ಮೇಲೆ ವಿಶ್ವಾಸ ಮೂಡಿಸಿ ನ್ಯಾಯ ದೊರೆಯುವ ವಿಶ್ವಾಸ ಇಮ್ಮಡಿಗೊಳಿಸಿದೆ. ಇಂತಹ ತೀರ್ಪು ನೀಡಿದ ನ್ಯಾಯಾಲಯಕ್ಕೆ ನನ್ನ ಅಭಿನಂದನೆಗಳು ಹಾಗೂ ಮತ್ತೆ ಲೋಕಾಯುಕ್ತ ಸಂಸ್ಥೆ ರಾಷ್ಟ್ರದಲ್ಲಿ ಮಾದರಿ ಸಂಸ್ಥೆಯಾಗಿ ರೂಪಿತವಾಗಿ ಜನರ ಸೇವೆ ಮಾಡಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.
ಸುದೀರ್ಘ ಹೋರಾಟಕ್ಕೆ ಯಶಸ್ಸು: ಎಸಿಬಿ ರದ್ದು ಪಡಿಸಿದ ಹೈಕೋರ್ಟ್ ಆದೇಶವನ್ನು ಆಮ್ ಆದ್ಮಿ ಪಾರ್ಟಿ ಸ್ವಾಗತಿಸಿದೆ. ಆರು ವರ್ಷಗಳ ಸುದೀರ್ಘ ಹೋರಾಟಕ್ಕೆ ಕೊನೆಗೂ ಯಶಸ್ಸು ಸಿಕ್ಕಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಹೇಳಿದ್ದಾರೆ.