ಬೆಂಗಳೂರು:ರಾಜ್ಯ ಸರ್ಕಾರ ಯಾವ ಕ್ಷಣದಲ್ಲಾದರೂ ಬಿದ್ದು ಮಧ್ಯಂತರ ಚುನಾವಣೆ ಎದುರಾಗಬಹುದು ಎಂಬ ಮಾತನ್ನು ಮಾಜಿ ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.
ಈ ಸಂಬಂಧ ಇಂದು ಟ್ವೀಟ್ ಮಾಡಿರುವ ಅವರು, ರಾಜ್ಯ ಬಿಜೆಪಿ ಸರ್ಕಾರ ಆಪರೇಷನ್ ಕಮಲದ ಅನೈತಿಕ ಕೂಸು. ಹಣ, ಆಮಿಷ, ಒತ್ತಡ ತಂತ್ರ ಉಪಯೋಗಿಸಿ ಶಾಸಕರನ್ನು ಕೊಂಡು, ವಾಮಮಾರ್ಗದ ಮೂಲಕ ಅಧಿಕಾರ ಹಿಡಿದಿರುವ ಯಡಿಯೂರಪ್ಪನವರ ಸರ್ಕಾರಕ್ಕೆ ಸ್ಪಷ್ಟ ಜನಾದೇಶವಿಲ್ಲ. ಈ ಸರ್ಕಾರ ಯಾವ ಕ್ಷಣದಲ್ಲಾದರೂ ಬಿದ್ದು ಮಧ್ಯಂತರ ಚುನಾವಣೆ ಬರಬಹುದು ಎಂದಿದ್ದಾರೆ.
ಟ್ವೀಟ್ ಮೂಲಕ ಪುನರುಚ್ಚರಿಸಿದ ಸಿದ್ದರಾಮಯ್ಯ ನಾವೀಗ ಅಧಿಕೃತ ವಿರೋಧ ಪಕ್ಷದ ಸ್ಥಾನದಲ್ಲಿದ್ದೇವೆ. ನಮ್ಮ ವಿರೋಧಿ ಕೋಮುವಾದಿ ಬಿಜೆಪಿ ಪಕ್ಷವೇ ಹೊರತು ಜೆಡಿಎಸ್ ಅಲ್ಲ. ನಾವ್ಯಾರು ಜೆಡಿಎಸ್ ಪಕ್ಷದವರ ಮೇಲೆ ಹಗೆ ಸಾಧಿಸುತ್ತಿಲ್ಲ. ಜಾತ್ಯಾತೀತ ಶಕ್ತಿಗೆ ಕೋಮುವಾದಿ ಶಕ್ತಿ ವಿರೋಧಿಯಾಗಿರುತ್ತದೆಯೇ ಹೊರತು, ಇನ್ನೊಂದು ಜಾತ್ಯಾತೀತ ಶಕ್ತಿಯಲ್ಲ ಎಂದಿದ್ದಾರೆ. ಗೋಕಾಕ, ಕಾಗವಾಡ ಮತ್ತು ಅಥಣಿ ಉಪ ಚುನಾವಣೆಗೆ ಸಂಬಂಧಿಸಿದಂತೆ ನಮ್ಮ ಪಕ್ಷದಿಂದ ವೀಕ್ಷಕರನ್ನು ನೇಮಿಸಲಾಗಿದೆ.
ಅವರು ಈ ಕ್ಷೇತ್ರಗಳ ಕಾರ್ಯಕರ್ತರು ಹಾಗೂ ಮುಖಂಡರನ್ನು ಭೇಟಿ ಮಾಡಿ, ಅವರ ಅಭಿಪ್ರಾಯ ಸಂಗ್ರಹಿಸಿ ನಮಗೆ ವರದಿ ಸಲ್ಲಿಸುತ್ತಾರೆ. ಆ ವರದಿಯ ಆಧಾರದ ಮೇಲೆ ನಾವು ನಮ್ಮ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆಎಂದು ವಿವರಿಸಿದ್ದಾರೆ.