ಬೆಂಗಳೂರು :ಮೈತ್ರಿ ಸರ್ಕಾರದ ವೇಳೆ ಜಾತಿ ಸಮೀಕ್ಷೆಯನ್ನು ಸ್ವೀಕರಿಸದಂತೆ ಆಗಿನ ಸಿಎಂ ಕುಮಾರಸ್ವಾಮಿ ಸಚಿವ ಪುಟ್ಟರಂಗಶೆಟ್ಟಿಗೆ ಬೈಯ್ದಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ರೇಸ್ ಕೋರ್ಸ್ ರಸ್ತೆಯಲ್ಲಿನ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಸಿಎಂ ಡಿ.ದೇವರಾಜು ಅರಸು ಜನ್ಮದಿನೋತ್ಸವದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಇದ್ದಾಗ ಜಾತಿ ಸಮೀಕ್ಷೆ ಮಾಡಿಸಿದ್ದೆವು. ಆವಾಗ ಸಮ್ಮಿಶ್ರ ಸರ್ಕಾರದಲ್ಲಿ ಪುಟ್ಟರಂಗ ಶೆಟ್ಟಿಗೆ ಹೇಳಿದ್ದೆ.
ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಮ್ಮ ಅವಧಿಯಲ್ಲಿ ಜಾತಿ ಗಣತಿ ವರದಿ ರೆಡಿಯಾಗಿರಲಿಲ್ಲ. ಈಗ ವರದಿ ತೆಗೆದುಕೊಳ್ಳಿ ಎಂದು ಹೇಳಿದ್ದೆ. ಆದರೆ, ಆಗಿನ ಸಚಿವ ಪುಟ್ಟರಂಗಶೆಟ್ಟಿಗೆ ವರದಿ ತೆಗೆದುಕೊಳ್ಳದಂತೆ ಕುಮಾರಸ್ವಾಮಿ ಬೈಯ್ದು ಕಳುಹಿಸಿದ್ದಾರೆ. ಇದು ನಡೆದಿರೋದು ಸತ್ಯ. ಬೇಕಾದರೆ ಪುಟ್ಟರಂಗಶೆಟ್ಟಿಯವರನ್ನೇ ಕೇಳಿ ಎಂದು ತಿಳಿಸಿದರು.
ನಾನು ಆವಾಗ ಸುಮ್ಮನಾದೆ. ಸಮ್ಮಿಶ್ರ ಸರ್ಕಾರದಲ್ಲಿ ಜಗಳ ಬೇಡ ಎಂದು ಮಾತನಾಡಲು ಹೋಗಿಲ್ಲ. ಅದು ಯಾವುದೇ ಜಾತಿ ಪರ ಶಿಫಾರಸು ಮಾಡಿದ ವರದಿ ಅಲ್ಲ. ಜಾತಿ ಸಮೀಕ್ಷೆ ಮಾಡಿ, ಪ್ರತಿಯೊಂದು ಜಾತಿಯ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಏನು ಎಂಬ ಅಂಕಿ-ಅಂಶ ಬಗ್ಗೆ ಇರುವ ವರದಿ. ಅದನ್ನು ಬಿಡುಗಡೆ ಮಾಡಲು ಏಕೆ ಹಿಂದೇಟು ಎಂದು ಕಿಡಿ ಕಾರಿದರು.
ವರದಿಯನ್ನ ಸಿದ್ದರಾಮಯ್ಯ ಬರೆಸಿರೋದು ಅಂತಾರಂತೆ. ಸುಳ್ಳು ಹೇಳೋದ್ರಲ್ಲಿ ಕುಮಾರಸ್ವಾಮಿ ನಿಸ್ಸೀಮರು. ಜಾತಿ ಗಣತಿ ವರದಿಯನ್ನು ತೆಗೆದು ಮೂಲೆಗೆ ಹಾಕಿದ್ದಾರೆ. ಈಗ ಬಿಜೆಪಿಯವರು ವರದಿ ತೆಗೆದುಕೊಳ್ಳಬೇಕು. ಆದರೆ, ಇನ್ನೂ ವರದಿಯನ್ನು ಅವರು ತೆಗೆದುಕೊಂಡಿಲ್ಲ. ಇವ್ರೆಲ್ಲಾ ಸುಳ್ಳುಗಾರರು, ಮೋಸಗಾರರು ಎಂದು ಕಿಡಿಕಾರಿದರು.
1931ರ ಬಳಿಕ ಜಾತಿ ಗಣತಿ ಆಗಿಲ್ಲ. 162 ಕೋಟಿ ರೂ. ಕೊಟ್ಟು ಸಮೀಕ್ಷೆ ಮಾಡಿಸಿದ್ದೆ. ಇಡೀ ಸರ್ಕಾರಿ ಶಾಲೆ ಶಿಕ್ಷಕರಿಂದ ಸಮೀಕ್ಷೆ ಮಾಡಿಸಿದ್ದೇನೆ. ಅದರಲ್ಲಿ ಬೇರೆ ಏನೂ ಉದ್ದೇಶವಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ : "ಅಫ್ಘಾನಿಸ್ತಾನದಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರಿಗಾಗಿ ನೋಡಲ್ ಅಧಿಕಾರಿ ನೇಮಕ"
ಸಾಮಾಜಿಕ ನ್ಯಾಯದ ಬಗ್ಗೆ ಬಿಜೆಪಿಯವರು ಮಾತನಾಡ್ತಾರೆ. ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರೋದು ಬಿಜೆಪಿ ಪಕ್ಷ. ಬಿಜೆಪಿಯವರು ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು. ಒಬಿಸಿ ಮೀಸಲಾತಿ ಈಗ ಕೊಟ್ಟಿದ್ದಾರೆ. ಸುಪ್ರೀಂಕೋರ್ಟ್ ಛೀಮಾರಿ ಹಾಕಿದ್ಮೇಲೆ ಕೊಟ್ಟಿದ್ದಾರೆ. ಇಲ್ಲದಿದ್ದರೆ ನ್ಯಾಯಾಂಗ ನಿಂದನೆ ಆಗುತ್ತಿತ್ತು.
ಇದಕ್ಕೆ ಹೆದರಿಯೇ ಅವರು ಮೀಸಲಾತಿ ತಂದಿದ್ದಾರೆ. ಈ ಮೀಸಲಾತಿ ನಾವು ಹಿಂದೆಯೇ ತಂದಿದ್ದೆವು. ಅದಕ್ಕೆ ಕೋರ್ಟ್ ನಲ್ಲಿ ತಡೆ ಹಾಕಿದ್ದರು. ಬಿಜೆಪಿಯ ರಾಮಾ ಜೋಯಿಸ್ ಅವರೇ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ್ದರು. ಆಗ ಕೇಸ್ ಕೂಡ ಬಿದ್ದು ಹೋಗಿತ್ತು. ಈಗ ಕೋರ್ಟ್ ಗೆ ಹೆದರಿ ಮೀಸಲಾತಿ ಜಾರಿಗೆ ತಂದಿದ್ದಾರೆ. ಹಿಂದುಳಿದ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಲ್ಲಿದ್ದರೂ ನಾವು ನಿಮ್ಮವರಣ್ಣ ಅಂತಾರೆ : ಬಿಜೆಪಿಗೆ ವಲಸೆ ಹೋದವರ ಬಗ್ಗೆ ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸುತ್ತಾ, ಏನ್ರಯ್ಯಾ ಬಿಜೆಪಿಗೆ ಹೋಗಿಬಿಟ್ರಾಲ್ಲ ಅಂದರೆ, ಅಲ್ಲಿದ್ರೂ ನಾವು ನಿಮ್ಮವರೇ ಕಣಣ್ಣ ಅಂತಾರೆ ಎಂದು ತಿಳಿಸಿದರು.
ರಾಜಕಾರಣಿಗಳು ಪಕ್ಷಾಂತರ ಮಾಡ್ತಾನೆ ಇರ್ತಾರೆ. ಅವಕಾಶ ಸಿಕ್ಕ ಕಡೆ ಹಿಂದುಳಿದವರು ಹೋಗ್ತಾರೆ. ಯಾವ ಪಕ್ಷದಲ್ಲಿ ಟಿಕೆಟ್ ಸಿಗುತ್ತೆ ಅಲ್ಲಿಗೆ ಹೋಗ್ತಾರೆ. ಯಾಕಪ್ಪ ಬಿಜೆಪಿಗೆ ಹೋಗಿದ್ದಿಯಾ ಅಂತಾ ಕೇಳಿದ್ರೆ. ಅಲ್ಲಿದ್ದರೂ ನಾವು ನಿಮ್ಮವರೇ ಕಣಣ್ಣ ಅಂತಾರೆ ಎಂದು ಪಕ್ಷಾಂತರಿಗಳ ವಿರುದ್ಧ ಕಿಡಿಕಾರಿದರು.