ಬೆಂಗಳೂರು: ಕಾರ್ಮಿಕ ಕಾಯ್ದೆ ತಿದ್ದುಪಡಿಯನ್ನು ವಿಧಾನಸಭೆ ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ.
ಕಾರ್ಮಿಕ ಕಾಯ್ದೆ ತಿದ್ದುಪಡಿಗೆ ಸಿದ್ದರಾಮಯ್ಯ ಖಂಡನೆ - ಸರ್ಕಾರದ ವಿರುದ್ದ ಸಿದ್ದರಾಮಯ್ಯ ಆಕ್ರೋಶ
ಕಾರ್ಮಿಕ ಕಾಯ್ದೆಗಳಿಗೆ ಅವಸರದಲ್ಲಿ ಮತ್ತು ಏಕಪಕ್ಷೀಯವಾಗಿ ತಿದ್ದುಪಡಿ ತರಲು ಹೊರಟಿರುವ ರಾಜ್ಯ ಸರ್ಕಾರ ಕೊರೊನಾ ಹಾವಳಿಯಿಂದಾಗಿ ಕಷ್ಟದಲ್ಲಿರುವ ಕಾರ್ಮಿಕರ ಗಾಯದ ಮೇಲೆ ಬರೆ ಹಾಕಲು ನಿರ್ಧರಿಸಿದಂತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಕಾರ್ಮಿಕ ಕಾಯ್ದೆಗಳಿಗೆ ಅವಸರದಲ್ಲಿ ಮತ್ತು ಏಕಪಕ್ಷೀಯವಾಗಿ ತಿದ್ದುಪಡಿ ತರಲು ಹೊರಟಿರುವ ರಾಜ್ಯ ಸರ್ಕಾರ ಕೊರೊನಾ ಹಾವಳಿಯಿಂದಾಗಿ ಕಷ್ಟದಲ್ಲಿರುವ ಕಾರ್ಮಿಕರ ಗಾಯದ ಮೇಲೆ ಬರೆ ಹಾಕಲು ನಿರ್ಧರಿಸಿದಂತಿದೆ. ಕೊರೊನಾ ಸೋಂಕಿನಿಂದಾಗಿ ನಷ್ಟದಲ್ಲಿರುವ ಉದ್ಯಮಗಳಿಗೆ ನೆರವಾಗುವುದೆಂದರೆ ಕಾರ್ಮಿಕರ ನ್ಯಾಯಬದ್ಧ ಹಕ್ಕುಗಳನ್ನು ಕಿತ್ತುಕೊಂಡು ಅವರನ್ನು ನಿರುದ್ಯೋಗಿಗಳನ್ನಾಗಿ ಮಾಡುವುದಲ್ಲ. ಮಾಲೀಕರದ್ದು ಮಾತ್ರವಲ್ಲ, ಕಾರ್ಮಿಕರ ಹಿತರಕ್ಷಣೆ ಕೂಡಾ ಚುನಾಯಿತ ಸರ್ಕಾರದ ಕರ್ತವ್ಯ.
ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಮೊದಲು ಕಾರ್ಮಿಕ ಪ್ರತಿನಿಧಿಗಳ ಜೊತೆಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಾತುಕತೆ ನಡೆಸಬೇಕು. ವಿಧಾನಮಂಡಲ ಅಧಿವೇಶನದಲ್ಲಿಯೂ ಚರ್ಚೆ ನಡೆಯಬೇಕು. ಈಗಿನ ಅವಸರದ ನಡೆಯ ಹಿಂದೆ ದುರುದ್ದೇಶದ ವಾಸನೆ ಹೊಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.