ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ನೀಡಿದ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನವೆಂಬರ್ 1ರಿಂದ ಪಾದಯಾತ್ರೆ ಮಾಡಲಾಗುವುದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಶಾಸಕರು ಹಾಗೂ ಪಕ್ಷದ ಮುಖಂಡರ ಸಭೆ ನಡೆಸಿದ ಬಳಿಕ ಮಾತನಾಡಿದ ಕುಮಾರಸ್ವಾಮಿ, ಇವತ್ತಿನ ಸಭೆಯಲ್ಲಿ ಪ್ರಮುಖವಾಗಿ ಸಾಲಮನ್ನಾ ಕುರಿತ ಮಾಹಿತಿಗಳನ್ನು ಎಲ್ಲಾ ತಾಲೂಕುಗಳಿಗೆ ತಲುಪಿಸಬೇಕು. ಜೊತೆಗೆ ನೆರೆ ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ. ಹಾಗಾಗಿ, ಪಾದಯಾತ್ರೆ ಮೂಲಕ ಸಾಲಮನ್ನಾ ಕಿರುಹೊತ್ತಿಗೆ ತಲುಪಿಸಲಾಗುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಜನರಿಗೆ ಕಿರು ಹೊತ್ತಿಗೆ ತಲುಪಿಸುವ ಕೆಲಸ ಮಾಡಲಾಗುತ್ತದೆ. ಸಾಲಮನ್ನಾದಿಂದ ರೈತರಿಗೆ ಆದ ಅನುಕೂಲದ ಬಗ್ಗೆ ಈ ಕಿರುಹೊತ್ತಿಗೆ ತಯಾರು ಮಾಡಲಾಗಿದೆ ಎಂದು ಹೇಳಿದರು.
ಋಣಮುಕ್ತ ಕಾಯ್ದೆ ವಿಷಯದಲ್ಲಿ ಶ್ರೀಮಂತರಿಗೆ ಸರ್ಕಾರ ರಕ್ಷಣೆ ಕೊಡುತ್ತಿರುವ ಬಗ್ಗೆ, ಮೈತ್ರಿ ಸರ್ಕಾರದಲ್ಲಿ ಜಾರಿಗೆ ತಂದ ಯೋಜನೆಗಳ ಕುರಿತು ಈ ಕಿರುಹೊತ್ತಿಗೆ ಸಿದ್ಧಪಡಿಸಲಾಗಿದೆ. ಹೀಗಾಗಿ ಮುಂದಿನ ಎರಡು ತಿಂಗಳು ಇದನ್ನು ಜನರಿಗೆ ತಲುಪಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಇನ್ನು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳೇ ಈ ಪಾದಯಾತ್ರೆ ನೇತೃತ್ವ ವಹಿಸಿಕೊಳ್ಳಬೇಕು. ಇವರ ಜೊತೆಗೆ ಆ ಭಾಗದ ಶಾಸಕರು ಕೂಡ ಇರಲಿದ್ದಾರೆ ಎಂದರು.
ಸಂಕ್ರಾಂತಿ ವೇಳೆಗೆ ಬೃಹತ್ ರೈತರ ರ‍್ಯಾಲಿ:
ಸಂಕ್ರಾಂತಿ ವೇಳೆಗೆ ಬೃಹತ್ ರೈತರ ರ‍್ಯಾಲಿ ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸದಸ್ಯತ್ವ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಸಲಾಗಿದೆ. ಮೈತ್ರಿ ಸರ್ಕಾರದಿಂದ ಸಾಲಮನ್ನಾ ಅನುಕೂಲ ಪಡೆದವರು ಪಕ್ಷದ ಸದಸತ್ವ ಮಾಡಿಕೊಳ್ಳುವಂಥದ್ದು. ಪ್ರತಿ ಹಳ್ಳಿಗೆ ಭೇಟಿ ಕೊಟ್ಟಾಗ ಸಾಲಮನ್ನಾ ಅನುಕೂಲ ಪಡೆದವರಿಂದ ಸದಸ್ಯತ್ವ ನೋಂದಣಿ ಪಡೆಯಲಾಗುವುದು. ಆ ಜನರ ಮನವೊಲಿಸಿ ಅವರಿಗೆ ಪಕ್ಷದ ಸದಸ್ಯತ್ವ ನೀಡುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.
ಬಿಜೆಪಿಯವರ ನಿಜ ಬಣ್ಣ ಬಯಲಾಗುತ್ತದೆಂದು ಮಾಧ್ಯಮಗಳಿಗೆ ನಿರ್ಬಂಧ:
ಬಿಜೆಪಿಯವರ ನಿಜ ಬಣ್ಣ ಬಯಲಾಗುತ್ತದೆಂದು ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ಇದು ಬಿಜೆಪಿಯ ಅತ್ಯಂತ ತಪ್ಪು ನಿರ್ಧಾರ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನನ್ನ ಅಡಳಿತಾವಧಿಯಲ್ಲಿ ಮಾಧ್ಯಮದವರಿಗೆ ಪ್ರತ್ಯೇಕವಾಗಿ ಒಂದು ಕೊಠಡಿ ಮೀಸಲಿಡುವ ವಿಚಾರವೇ ದೊಡ್ಡ ಮಟ್ಟದಲ್ಲಿ ಚರ್ಚೆಯಾಯಿತು. ಅದನ್ನು ನಾನು ಮರೆತಿಲ್ಲ. ಸಭಾಧ್ಯಕ್ಷರು ಯಾರ ಚಿತಾವಣೆಯಿಂದ ಕಲಾಪ ಪ್ರಸಾರಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದಾರೋ ಗೊತ್ತಿಲ್ಲ. ಕಲಾಪದ ಮಾಹಿತಿ ರಾಜ್ಯದ ಜನತೆಗೆ ಸಂಪೂರ್ಣವಾಗಿ ತಲುಪುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ. ನೆರೆ ವಿಚಾರದಲ್ಲಿ ಸರ್ಕಾರದ ವೈಫಲ್ಯಗಳು ನೇರವಾಗಿ ರಾಜ್ಯದ ಜನತೆಗೆ ತಿಳಿಯುತ್ತದೆ ಎಂಬ ಭಯ ಬಿಜೆಪಿ ನಾಯಕರಿಗೆ ಇರಬಹುದು. ಕಲಾಪದಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.