ಬೆಂಗಳೂರು :ರಾಷ್ಟ್ರಪತಿ ಆಯ್ಕೆ ಸಂಬಂಧ ಬಿಜೆಪಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು, ಈಗಾಗಲೇ ಅವರಿಗೆ ಬಹುಮತದ ಸಂಖ್ಯೆ ಸಿಕ್ಕಿದೆ. ನಮ್ಮ ಪಕ್ಷದ ಬೆಂಬಲದ ಅವಶ್ಯಕತೆ ಇಲ್ಲ. ಆದರೂ ನಮ್ಮ ಬೆಂಬಲ ಕೇಳಿದ್ದಾರೆ. ಅದು ಅವರ ಔದಾರ್ಯ ಎಂದು ಬೆಂಬಲ ನೀಡುವ ಬಗ್ಗೆ ಪರೋಕ್ಷವಾಗಿ ಹೇಳಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುರ್ಮು ಈಗಾಗಲೇ ಗೆದ್ದಾಗಿದೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ಮುರ್ಮು ಅವರು ಎರಡು ಬಾರಿ ದೂರವಾಣಿ ಕರೆ ಮಾಡಿ ಬೆಂಬಲಕ್ಕೆ ಮನವಿ ಮಾಡಿದ್ದಾರೆ. ಬೆಂಗಳೂರಿಗೆ ಬಂದು ಮನವಿ ಮಾಡಲು ಅವರು ಸಮಯ ಕೋರಿದ್ದರು. ಅವರು ಖುದ್ದು ಬಂದು ಮನವಿ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು. ಚುನಾವಣಾ ಅಭ್ಯರ್ಥಿಯಾಗಿ ಮುರ್ಮು ಕಣದಲ್ಲಿದ್ದಾರೆ. ಅವರ ಹಿನ್ನೆಲೆ ಏನು?. ಎಷ್ಟು ಕಷ್ಟ ಅನುಭವಿಸಿದ್ದಾರೆ ಅಂತಾ ನಾನು ಗಮನಿಸಿದ್ದೇನೆ ಎಂದರು.
ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನು ಹಾಳು ಮಾಡಿವೆ :ಇಲ್ಲಿ ಕಾಂಗ್ರೆಸ್, ಬಿಜೆಪಿ ಅನ್ನುವ ಪ್ರಶ್ನೆ ಅಲ್ಲ. ಬಿ ಟೀಂ ಅನ್ನುವ ಪ್ರಶ್ನೆ ರಾಷ್ಟ್ರಪತಿ ಚುನಾವಣೆಗೆ ಬರಲ್ಲ. ನಾವು ತೆಗೆದುಕೊಂಡ ನಿರ್ಧಾರ ಬಿಜೆಪಿ ಬಿ ಟೀಂ ಅಂತಾ ಪ್ರಚಾರ ಮಾಡೋದು ಇದಕ್ಕೆ ಅನ್ವಯ ಆಗಲ್ಲ. ಹಾಗಾಗಿ, ಪಕ್ಷದ ನಾಯಕರು ಕುಳಿತು ಇಬ್ಬರು ಅಭ್ಯರ್ಥಿಗಳ ಬಗ್ಗೆ ಚರ್ಚೆ ಮಾಡಿ ನಂತರ ತೀರ್ಮಾನ ಮಾಡಲಾಗುವುದು ಎಂದರು. ರಾಜ್ಯದ ಜನರಿಗೆ ವಿದ್ಯುತ್ ಶಾಕ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗ ಹೆಚ್ಚಳ ಮಾಡಿ ಚುನಾವಣೆ ಸಮಯದಲ್ಲಿ ಕಡಿಮೆ ಮಾಡ್ತಾರೆ. ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನು ಹಾಳು ಮಾಡಿವೆ ಎಂದು ಕಿಡಿಕಾರಿದರು.
ವಿದ್ಯುತ್ ಸಚಿವರು ಕೆಇಆರ್ಸಿ ದರ ಹೆಚ್ಚಳ ಮಾಡುತ್ತದೆಂದು ಹೇಳುತ್ತಾರೆ. ನಿವೃತ್ತ ಐಎಎಸ್ ಅಧಿಕಾರಿ ಗುರು ಚರಣ್ ಇಂಧನ ಇಲಾಖೆ ಪರಿಸ್ಥಿತಿ ಬಗ್ಗೆ ವರದಿ ಕೊಟ್ಟಿದ್ದಾರೆ. ಎಸ್ಕಾಂಗಳು ಸೇರಿ ಎಲ್ಲಾ ಕಂಪನಿಗಳ ಪರಿಸ್ಥಿತಿ ಬಗ್ಗೆ ವರದಿ ನೀಡಿದ್ದಾರೆ. ಈ ವರದಿಯಲ್ಲಿ 30-38 ಸಾವಿರ ಕೋಟಿ ಹಣ ಸರ್ಕಾರದಿಂದಲೇ ಕೆಇಆರ್ಸಿಗೆ ಕೊಡಬೇಕು. ನಾನು ಕೂಡ ಸಿಎಂ ಆಗಿದ್ದಾಗ ಎಸ್ಕಾಂ ಸೇರಿದಂತೆ ಎಲ್ಲಾ ಕಂಪನಿಗಳಿಗೆ ನನ್ನ ಕಾಲದಲ್ಲಿ 13-14 ಸಾವಿರ ಕೋಟಿ ಮಾತ್ರ ಕೊಡಬೇಕಿತ್ತು. 3 ವರ್ಷಕ್ಕೆ ಬಿಜೆಪಿ-ಕಾಂಗ್ರೆಸ್ ಸರ್ಕಾರಗಳು 30 ಸಾವಿರ ಕೋಟಿ ಮಾಡಿವೆ. ಬುಕ್ಸ್ ಆಫ್ ಅಕೌಂಟ್ನಲ್ಲಿ ಮಾತ್ರ ಲಾಭ ತೋರಿಸಿಕೊಂಡಿದ್ದಾರೆ ಎಂದರು.