ಕರ್ನಾಟಕ

karnataka

ಬಿಜೆಪಿ ಸರ್ಕಾರಕ್ಕೆ ಪ್ರಚಾರ ಜಾಸ್ತಿ, ಫಲಿತಾಂಶ ನಾಸ್ತಿ ಎಂಬ ನೀತಿ: ಹೆಚ್​ಡಿಕೆ

By

Published : Mar 5, 2023, 3:51 PM IST

ಸರ್ಕಾರದ ವಿರುದ್ಧ ಟ್ವಿಟ್ಟರ್​ನಲ್ಲಿ ಹರಿಹಾಯ್ದ ಮಾಜಿ ಸಿಎಂ ಹೆಚ್​ಡಿಕೆ - ಅಭಿವೃದ್ಧಿಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ - ಉದ್ಯೋಗ ಸೃಷ್ಟಿ ಬಗ್ಗೆ ಎಳ್ಳಷ್ಟೂ ದೂರದೃಷ್ಟಿ ಇಲ್ಲ ಎಂದ ಕುಮಾರಸ್ವಾಮಿ

former-cm-hdk-who-criticized-the-government-on-twitter
ಬಿಜೆಪಿ ಸರ್ಕಾರಕ್ಕೆ ಪ್ರಚಾರ ಜಾಸ್ತಿ, ಫಲಿತಾಂಶ ನಾಸ್ತಿ ಎಂಬ ನೀತಿ: ಹೆಚ್​ಡಿಕೆ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ್ದು ಪ್ರಚಾರ ಜಾಸ್ತಿ, ಫಲಿತಾಂಶ ನಾಸ್ತಿ ಎನ್ನುವ ನೀತಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಫಾಕ್ಸ್​ಕಾನ್ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಯಾವುದೇ ಒಪ್ಪಂದ ಆಗಿಲ್ಲ ಎಂಬ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ರಾಜ್ಯ ಬಿಜೆಪಿ ಸರಕಾರದ್ದು ಪ್ರಚಾರ ಜಾಸ್ತಿ, ಫಲಿತಾಂಶ ನಾಸ್ತಿ ಎನ್ನುವ ನೀತಿ. ಇದೇ ಅದರ ಘೋಷವಾಕ್ಯ, ಧ್ಯೇಯವಾಕ್ಯ, ಜಾಹೀರಾತುಗಳಲ್ಲಿಯೇ ಬಳಕೆ ಮಾಡುತ್ತಿರುವ ಈ ಸರ್ಕಾರಕ್ಕೆ ಜನರ ಕ್ಷೇಮ, ಅಭಿವೃದ್ಧಿಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ಉದ್ಯೋಗ ಸೃಷ್ಟಿ ಬಗ್ಗೆ ಎಳ್ಳಷ್ಟೂ ದೂರದೃಷ್ಟಿ ಇಲ್ಲ ಎಂದು ಕಿಡಿಕಾರಿದ್ದಾರೆ.

ಐಫೋನ್ ತಯಾರಿಸುವ ತೈವಾನ್‌ ದೇಶದ ಫಾಕ್ಸ್‌ಕಾನ್‌ ಕಂಪನಿ ರಾಜ್ಯದಲ್ಲಿ ಹೂಡಿಕೆ ಮಾಡಲು ಬಂದಿದೆ ಎಂದು ಶುಕ್ರವಾರ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಅವರು ಹಾಗೂ ಇಬ್ಬರು ಸಚಿವರು ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡರು. ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಕೈಯಲ್ಲಿ ಸಹಿ ಪತ್ರಗಳನ್ನ ಹಿಡಿದು ಮಾಧ್ಯಮಗಳಿಗೆ ಪೋಸು ಕೊಟ್ಟರು ಎಂದು ಟೀಕಿಸಿದ್ದಾರೆ.

ಅದೇನು ಒಪ್ಪಂದವೋ ಅಥವಾ ಪ್ರಚಾರದ ಗಿಮಿಕ್ಕೋ?: ಇದರ ಬೆನ್ನಲ್ಲೇ ತೈವಾನ್‌ʼನ ತೈಪೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಫಾಕ್ಸ್​ಕಾನ್​ ಕಂಪನಿ, "ಕರ್ನಾಟಕದಲ್ಲಿ ಹೂಡಿಕೆ ಮಾಡುವ ಯಾವುದೇ ನಿರ್ಣಾಯಕ ಒಪ್ಪಂದ ಆಗಿಲ್ಲ" ಎಂದು ಸ್ಪಷ್ಟಪಡಿಸಿದೆ. ಹಾಗಾದರೆ, ಶುಕ್ರವಾರ ಬೊಮ್ಮಾಯಿ ಸಮಕ್ಷಮದಲ್ಲಿ ಆಗಿದ್ದೇನು? ಅದೇನು ಒಪ್ಪಂದವೋ ಅಥವಾ ಪ್ರಚಾರದ ಗಿಮಿಕ್ಕೋ?. ಜನರಿಗೆ ತಿಳಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಈ ಬಿಜೆಪಿ ಸರ್ಕಾರಕ್ಕೆ ಅಧಿಕಾರವೇ ಮುಖ್ಯ: ಕೋವಿಡ್‌ ನಂತರದ ಕಾಲದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆಗೆ ಬಹಳ ಮಹತ್ವವಿದೆ. ಸರಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಎಡವಟ್ಟು ಮಾಡಿಕೊಂಡ ಕಾರಣಕ್ಕೆ ಓಲಾ ಕಂಪನಿ ಕರ್ನಾಟಕದ ಕೈ ಜಾರಿತು. ₹7,614 ಕೋಟಿ ಹೂಡಿಕೆ ತಮಿಳುನಾಡು ರಾಜ್ಯದ ಪಾಲಾಯಿತು ಎಂದು ಟೀಕಿಸಿದ್ದಾರೆ. ಚುನಾವಣೆ, ಪ್ರಚಾರಕ್ಕಿಂತ ಜನರ ಬದುಕು ಮುಖ್ಯ. ಈ ಬಿಜೆಪಿ ಸರಕಾರಕ್ಕೆ ಅಧಿಕಾರವೇ ಮುಖ್ಯ. ಉಳಿದಿದ್ದೆಲ್ಲ ಅಮುಖ್ಯ. ಕನ್ನಡಿಗರ ಕಷ್ಟಗಳಿಗೆ ಕೊನೆ ಇಲ್ಲ ಎನ್ನುವಂತಾಗಿದೆ ಎಂದು ಹೆಚ್​ಡಿಕೆ ವಾಗ್ದಾಳಿ ನಡೆಸಿದ್ದಾರೆ.

500 ಕಂಪನಿಗಳಲ್ಲಿ 20ನೇ ಸ್ಥಾನ: ಫಾಕ್ಸ್‌ಕಾನ್‌ ಕಂಪನಿಯು ವಿಶ್ವದ ಅತಿದೊಡ್ಡ ಎಲೆಕ್ಟ್ರಾನಿಕ್‌ ತಯಾರಿಕಾ ಕಂಪನಿಯಾಗಿದ್ದು, 2022 ರಲ್ಲಿ NT$ 6 trillion ಗೂ ಹೆಚ್ಚು ವಹಿವಾಟು ನಡೆಸಿದೆ. ಜಗತ್ತಿನ ಫಾರ್ಚೂನ್‌ 500 ಕಂಪನಿಗಳಲ್ಲಿ 20ನೇ ಸ್ಥಾನದಲ್ಲಿದೆ. ವಿಶ್ವದ 24 ದೇಶಗಳಲ್ಲಿ 173 ಕ್ಯಾಂಪಸ್‌ ಗಳನ್ನು ಹೊಂದಿರುವ ಕಂಪನಿಯು ಮುಖ್ಯವಾಗಿ ಸ್ಮಾರ್ಟ್‌ ಫೋನ್‌, ಟಿವಿಗಳು, ಗೇಮ್‌ ಕನ್ಸೋಲ್ಸ್‌, ಕ್ಲೌಡ್‌ ಮತ್ತು ನೆಟ್‌ ವರ್ಕಿಂಗ್‌ ಉತ್ಪನ್ನಗಳು, ಕಂಪ್ಯೂಟಿಂಗ್‌ ಉತ್ಪನ್ನಗಳು ಮತ್ತು ಇತರ ಬಿಡಿ ಭಾಗಗಳ ಉತ್ಪಾದನೆಯಲ್ಲಿ ತೊಡಗಿದೆ.

ಇದನ್ನೂ ಓದಿ:ರಾಜ್ಯಕ್ಕೆ ಎಂಟ್ರಿ ಕೊಟ್ಟ ವಿಶ್ವದ ಅತಿದೊಡ್ಡ ಎಲೆಕ್ಟ್ರಾನಿಕ್‌ ತಯಾರಿಕಾ ಕಂಪನಿ: ರಾಜ್ಯ ಸರ್ಕಾರದ ಜೊತೆ ಫಾಕ್ಸ್ ಕಾನ್ ಕಂಪನಿ ಒಡಂಬಡಿಕೆ

ABOUT THE AUTHOR

...view details