ಬೆಂಗಳೂರು:ಕರ್ನಾಟಕದ ನೀರು ಮಹಾರಾಷ್ಟ್ರಕ್ಕೆ ಬಿಡುತ್ತೇವೆ ಎಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು, ಯಡಿಯೂರಪ್ಪನವರಿಗೆ ನಾಚಿಕೆ ಆಗಬೇಕು. ನಮಗೆ ಮೋಸ ಮಾಡಿದವರ ಪರ ಮಾತನಾಡುತ್ತಿದ್ದಾರೆ. ಇದನ್ನು ನಾಡಿನ ಜನ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಮಹಾರಾಷ್ಟ್ರಕ್ಕೆ ನೀರು ಬಿಡುಗಡೆ ವಿಚಾರ : ಸಿಎಂ ಬಿಎಸ್ವೈಗೆ ನಾಚಿಕೆ ಆಗಬೇಕೆಂದ ಮಾಜಿ ಸಿಎಂ ಹೆಚ್ಡಿಕೆ ಜೆಪಿ ನಗರದ ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ನಮ್ಮ ರಾಜ್ಯದ ಜನರ ಬಗ್ಗೆ ಯಡಿಯೂರಪ್ಪನವರು ಯೋಚನೆ ಮಾಡಲಿ. ಅದು ಬಿಟ್ಟು ನಮಗೆ ಮೋಸ ಮಾಡಿದ ಸರ್ಕಾರಕ್ಕೆ ನೀರು ಬಿಡುವುದು ಬೇಡ ಎಂದರು.
ಈ ಹಿಂದೆ ನೀರಾವರಿಗೆ ಸಹಕಾರ ಕೊಡಲಿಲ್ಲವೆಂದು ಶ್ರೀಮಂತ ಪಾಟೀಲ್ ಅವರು ರಾಜೀನಾಮೆ ಕೊಟ್ಟೆ ಅಂತ ಹೇಳಿದ್ರು. ಆದರೆ, ನನ್ನ ಅವಧಿಯಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದರು. ಆದರೆ, ಅವತ್ತು ಅವರು ನೀರು ಬಿಡಲಿಲ್ಲ. ಇಂತಹ ಸರ್ಕಾರದ ಪರ ಸಿಎಂ ಯಡಿಯೂರಪ್ಪನವರು ಮತ ಕೇಳಲು ಹೋಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಪ್ರಮಾಣ ವಚನ ಕಾರ್ಯಕ್ರಮದ ಸಂದರ್ಭದಲ್ಲಿ ನಾನು ಮಹಾರಾಷ್ಟ್ರ ಸಿಎಂ ಫಡ್ನವಿಸ್ಗೆ ಮನವಿ ಮಾಡಿದ್ದೆ. ಮೋದಿ ಅವರಿಗೂ ಮನವಿ ಮಾಡಿದ್ದೆ. ಆದರೆ, ಅವರು ಮಾತ್ರ ನಮಗೆ ನೀರು ಬಿಡಲಿಲ್ಲ. ಆ ಮೇಲೆ ನಮಗೂ ಮಾತುಕತೆಗೆ ಅವಕಾಶ ಕೊಡಲಿಲ್ಲ. ನಮ್ಮ ಜನರ ಜೀವನದ ಜೊತೆ ಚೆಲ್ಲಾಟ ಆಡಿದವರ ಪರ ಮತ ಕೇಳುವುದಕ್ಕೆ ಹೋಗಿದ್ದಾರೆ. ನಮ್ಮ ರಾಜ್ಯದ ರೈತರ, ಜನರ ಸಮಸ್ಯೆ ಬಗ್ಗೆ ಮೊದಲು ಯಡಿಯೂರಪ್ಪ ಗಮನ ಕೊಡಲಿ ಎಂದು ಟಾಂಗ್ ನೀಡಿದರು.
ಜೆಡಿಎಸ್ ನ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಹಾಗೂ ಮಾಜಿ ಸಚಿವ ಸಾ.ರಾ. ಮಹೇಶ್ ನಡುವೆ ಆಣೆ ಪ್ರಮಾಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ಕೆಲವರು ಆಣೆ ಪ್ರಮಾಣದ ಬಗ್ಗೆ ಹೊರನೋಟ ಇಲ್ಲದವರು. ಅವರಿಗೆ ದೇವರ ಬಗ್ಗೆ ನಂಬಿಕೆಯೇ ಇಲ್ಲ ಎಂದರು.
ಈ ಹಿಂದೆ ಧರ್ಮಸ್ಥಳದಲ್ಲಿ ನಾನು ಆಣೆ ಮಾಡಿದ್ದೇನೆ. ಸತ್ಯ ಇರೋದರ ಬಗ್ಗೆ ನಾನು ಆಣೆ ಮಾಡಿದ್ದೆ. ಈ ಹಿಂದೆ ಧರ್ಮಸ್ಥಳದಲ್ಲಿ ಇದೇ ರೀತಿಯ ಡ್ರಾಮ ನಡೆದಿತ್ತು. ಯಡಿಯೂರಪ್ಪ ದೇವಸ್ಥಾನಕ್ಕೆ ಬಂದಿದ್ರು. ನಾನು ಕೂಡ ಧರ್ಮಸ್ಥಳಕ್ಕೆ ಬಂದಿದ್ದೆ. ಆದರೆ ಯಡಿಯೂರಪ್ಪ ಬಂದು ದೇವರಿಗೆ ನಮಸ್ಕಾರ ಮಾಡಿ ಹೊರಟು ಹೋದರು. ಆದರೆ, ನಾನು ಅಲ್ಲಿ ನಾನು ಹೇಳಿರುವುದು ಸತ್ಯ, ಸತ್ಯ, ಸತ್ಯ ಎಂದು ಮೂರು ಬಾರಿ ಪ್ರಮಾಣ ಮಾಡಿದ್ದೆ. ಆದಾದ ನಂತರ ಯಡಿಯೂರಪ್ಪ ಅಧಿಕಾರ ಬಿಡಬೇಕಾದ ಸಂದರ್ಭ ಬಂತು. ಅವರು ಹಲವಾರು ದೇಶದ ಸಂವಿಧಾನಗಳಲ್ಲಿ ಅವರು ರಕ್ಷಣೆ ಪಡೆದುಕೊಂಡರು. ಆದರೆ, ಅವರು ದೇವರಿಂದ ರಕ್ಷಣೆ ಪಡೆದುಕೊಳ್ಳುವುದಕ್ಕೆ ಆಗಿಲ್ಲ ಎಂದು ಹೇಳಿದರು.
ಇವತ್ತು ಮೈಸೂರಿನಲ್ಲಿ ನಡೆದ ಈ ಪ್ರಕರಣ ಅವಶ್ಯಕತೆ ಇರಲಿಲ್ಲ. ಹೆಚ್. ವಿಶ್ವನಾಥ್ ಅವರು ಬಿಜೆಪಿಗೆ ಹೋಗಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ವಿಶ್ವನಾಥ್ ಖರೀದಿ ಬಗ್ಗೆ ಜನ ಸಾಮಾನ್ಯರಿಗೂ ಗೊತ್ತಿದೆ. ಯಾವ ವ್ಯಕ್ತಿ ನಿಮ್ಮನ್ನು ಎಳೆದಿದ್ದಾರೆ ಅವರ ಬಗ್ಗೆ ನೀವು ಚರ್ಚೆ ಮಾಡುವ ಅಗತ್ಯತೆ ಇಲ್ಲವೆಂದು ಸಾ.ರಾ.ಮಹೇಶ್ ಅವರಿಗೆ ನಾನು ಮನವಿ ಮಾಡುತ್ತೇನೆ. ಚಾಮುಂಡಿಬೆಟ್ಟದಲ್ಲಿ ನಡೆದ ಡ್ರಾಮಾ ಅಗತ್ಯ ಇರಲಿಲ್ಲ. ಮುಂದಿನ ತೀರ್ಮಾನವನ್ನು ಹುಣಸೂರಿನ ಜನರು ಮಾಡುತ್ತಾರೆ. ಇವತ್ತು ಚಾಮುಂಡಿ ಸನ್ನಿಧಿಯಲ್ಲಿ ಏನು ಡ್ರಾಮಾ ಆಗಿದೆಯೋ ಅದನ್ನೆಲ್ಲ ಆ ಚಾಮುಂಡೇಶ್ವರಿ ಗಮನಿಸುತ್ತಿದ್ದು ತಕ್ಕ ಪಾಠ ಆ ತಾಯಿಯೇ ಕಲಿಸುತ್ತಾಳೆ ಎಂದು ಹೇಳಿದ್ದಾರೆ.
ರಾಜೀನಾಮೆ ಕೊಟ್ಟಿರುವುದು ನಿಜ : ವಿಧಾನಸಭಾಧ್ಯಕ್ಷರಿಗೆ ಸಾ.ರಾ. ಮಹೇಶ್ ರಾಜೀನಾಮೆ ಕೊಟ್ಟಿರುವುದು ನಿಜ. ನಾನು ಮತ್ತು ಸಾ.ರಾ. ಮಹೇಶ್ ಸ್ವಂತ ಅಣ್ಣತಮ್ಮಂದಿರ ರೀತಿ ಇದ್ದೇವೆ. ಅವರ ಸ್ವಭಾವದ ಬಗ್ಗೆ ನನಗೆ ಗೊತ್ತಿದೆ. ಅವರು ಕೊಟ್ಟಿರುವ ರಾಜೀನಾಮೆಯನ್ನು ವಾಪಸು ಪಡೆಯುತ್ತಾರೆ. ಸ್ಪೀಕರ್ ಅವರ ಜೊತೆ ನಾನು ಈಗಾಗಲೇ ಮಾತನಾಡಿದ್ದೇನೆ. ಅವರು ರಾಜೀನಾಮೆಯನ್ನು ವಾಪಸ್ ಪಡೆಯುತ್ತಾರೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ನಾಯಕತ್ವ ತ್ಯಜಿಸಲು ಸಿದ್ದ : ಹಿರಿಯ ನಾಯಕ ಬಸವರಾಜ ಹೊರಟ್ಟಿ ಸೇರಿದಂತೆ ಹಲವು ನಾಯಕರ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನನ್ನ ನಾಯಕತ್ವದಲ್ಲಿ ಅವರಿಗೆ ವಿಶ್ವಾಸ ಇಲ್ಲದಿದ್ದರೆ ನಾನು ನಾಯಕತ್ವ ತ್ಯಜಿಸಲು ಸಿದ್ದ. ಅಸಮಾಧಾನವಿದ್ದರೆ ದೇವೇಗೌಡರ ಜೊತೆ ಮಾತನಾಡಿಕೊಂಡು ಹೊಸ ನಾಯಕತ್ವ ಹುಡುಕಿಕೊಳ್ಳಲಿ. ಅದಕ್ಕೆ ನನ್ನ ಯಾವುದೇ ವಿರೋಧ ಇಲ್ಲ ಎಂದರು. ಎಲ್ಲರ ಜೊತೆ ನಾನು ಗೌರವಯುತವಾಗಿ ನಡೆದುಕೊಂಡಿದ್ದೇನೆ. ಯಾರಿಂದಲೂ ಆ ವಿಚಾರವಾಗಿ ನಾನು ಸರ್ಟಿಫಿಕೇಟ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಅವರಿಗೆ ಬೇಕಾದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಹೇಳಿದರು.
ಗೋಪಾಲಯ್ಯ ವಾಪಸ್ ಕರೆಯಿಸೋ ಪ್ರಶ್ನೆಯೇ ಇಲ್ಲ : ಜೆಡಿಎಸ್ ನ ಅನರ್ಹ ಶಾಸಕರನ್ನು ವಾಪಸ್ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಶಾಸಕ ಕೆ.ಗೋಪಾಲಯ್ಯ ಎರಡು ಬಾರಿ ನಮಗೆ ಮೋಸ ಮಾಡಿದ್ದಾರೆ. ಅವರು ನಮಗೆ ಟೋಪಿ ಹಾಕಿದ್ದಾರೆ. ದೇವೇಗೌಡರ ಹತ್ತಿರ ಬೇಡಿಕೊಂಡು ಮತ್ತೆ ಪಕ್ಷಕ್ಕೆ ವಾಪಸ್ ಆದರು. ಮತ್ತೆ ಅವರೇ ನಮಗೆ ದ್ರೋಹ ಮಾಡಿದರು. ಮತ್ತೆ ಅವರನ್ನು ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಸಾಲಮನ್ನಾ ವಿಚಾರ ಸಂಬಂಧ ಮಾತನಾಡಿದ ಹೆಚ್ ಡಿಕೆ, ಮೊನ್ನೆ ಯಡಿಯೂರಪ್ಪ ಅವರು ಗಾಬರಿ ಹೇಳಿಕೆ ಕೊಟ್ಟಿದ್ದಾರೆ. ನಾನು ಘೋಷಣೆ ಮಾಡಿದ ಸಾಲಮನ್ನಾದಿಂದ ಯಡಿಯೂರಪ್ಪ ಅವರಿಗೆ ಯಾವುದೇ ಹೊರೆ ಆಗುವುದಿಲ್ಲ. ನಾನು ಬಜೆಟ್ ನಲ್ಲಿ ಹಣ ಇಟ್ಟಿದ್ದೇನೆ. ನನ್ನ ಸಾಲಮನ್ನಾಗೆ ಯಡಿಯೂರಪ್ಪ ಹೊಸ ಹಣ ಸಂಗ್ರಹ ಮಾಡುವುದು ಬೇಡ. ಈಗಲೂ ಆ ಹಣ ಇದೆ. ಇದಕ್ಕಾಗಿ ಹೊಸ ಹಣ ಸಂಗ್ರಹ ಅವಶ್ಯಕತೆ ಇಲ್ಲ ಎಂದರು.
ವೈಜ್ಞಾನಿಕವಾಗಿ ನಾನು ಸಾಲಮನ್ನಾಗೆ ಹಣ ಇಟ್ಟಿದ್ದೇನೆ. ಆ ಹಣ ಬಿಡುಗಡೆ ಮಾಡಿದರೆ ಸಾಕಾಗುತ್ತದೆ. ಇವತ್ತು ಯಡಿಯೂರಪ್ಪ ಅದಕ್ಕೆ ವಿವರಣೆ ನೀಡಿದ್ದಾರೆ. ನೆರೆಗೆ - ಸಾಲಮನ್ನಾ ಹಣಕ್ಕೂ ಹೊಂದಾಣಿಕೆ ಮಾಡೋದು ಬೇಡ. ಯಡಿಯೂರಪ್ಪ ಅವರು ಘೋಷಣೆ ಮಾಡಿದ ಸಾಲಮನ್ನಾದ ಬಗ್ಗೆ ಅವರು ತೀರ್ಮಾನ ಮಾಡಬೇಕು. ನಾನು ಕೊಟ್ಟ ಮಾತನ್ನ ಸಾಲಮನ್ನಾ ವಿಚಾರದಲ್ಲಿ ಉಳಿಸಿಕೊಂಡಿದ್ದೇನೆ. ನಾನು ಜನರಿಗೆ ಟೋಪಿ ಹಾಕಿಲ್ಲ. ನನ್ನ ಮಾತು ನಾನು ಉಳಿಸಿಕೊಂಡಿದ್ದೇನೆ. ಯಡಿಯೂರಪ್ಪ ಅವರು ಘೋಷಣೆ ಮಾಡಿದ ಸಾಲಮನ್ನಾದ ಬಗ್ಗೆ ಅವರು ನಿರ್ಧಾರ ಮಾಡಲಿ ಎಂದರು.