ಬೆಂಗಳೂರು: ಈಗ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಹೇಳುವ ನಾಯಕರೇ ಈ ಹಿಂದೆ ಅವರಪ್ಪನಾಣೆ ನಾನು ಸಿಎಂ ಆಗಲ್ಲ ಅಂತಾ ಹೇಳಿದ್ದರು. ಆದರೆ, ಅವರೇ 2018 ರಲ್ಲಿ ನಮ್ಮ ಮನೆ ಬಾಗಿಲಿಗೆ ಬಂದು ನೀವೇ ಮುಖ್ಯಮಂತ್ರಿಯಾಗಿ ಎಂದು ದುಂಬಾಲು ಬಿದ್ದಿದ್ದನ್ನು ಇಡೀ ರಾಜ್ಯ ನೋಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.
ರಾಜರಾಜೇಶ್ವರಿ ನಗರ ಕ್ಷೇತ್ರ ವ್ಯಾಪ್ತಿಯ ಬಂಗಾರಪ್ಪ ನಗರದಲ್ಲಿ ಇಂದು ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ಪ್ರಚಾರ ನಡೆಸಿ ಮಾತನಾಡಿದರು. ಜೆಡಿಎಸ್ ಪಕ್ಷದಿಂದ ಬೆಳೆದು ಬೆನ್ನಿಗೆ ಚೂರಿ ಹಾಕಿದ ಸಿದ್ದರಾಮಯ್ಯ, ಜೆಡಿಎಸ್ ಪಕ್ಷಕ್ಕೆ ಹೀರೋ ಆಗಲು ಸಾಧ್ಯವೇ ಇಲ್ಲ. ಅವರು ಎಂದಿಗೂ ವಿಲನ್, ಕಾಂಗ್ರೆಸ್ ಪಕ್ಷದ ಒಂದು ವರ್ಗಕ್ಕೂ ಸಿದ್ದರಾಮಯ್ಯ ವಿಲನ್ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಮುಂದೆ ಕೂಡ ಸಿದ್ದರಾಮಯ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತ ಸ್ಥಿತಿಗೆ ಬರುವ ಕಾಲ ಬಹಳ ದೂರವಿಲ್ಲ ಎಂದು ಹೆಚ್ಡಿಕೆ ವ್ಯಂಗ್ಯವಾಡಿದರು.
ಜೆಡಿಎಸ್ ಬಡವರು, ಶ್ರಮಿಕರು, ರೈತರು ಬೆಳೆಸಿದ ಪಕ್ಷ. ನಮ್ಮ ಹೊಣೆಗಾರಿಕೆ ಏನಿದ್ದರೂ ಜನರದ್ದು, ನಾವು ಅಂಬಾನಿ, ಅದಾನಿಗೆ ನಮ್ಮ ಪಕ್ಷದ ಜವಾಬ್ದಾರಿ ನೀಡಿಲ್ಲ. ಸಾಮಾನ್ಯ ಕಾರ್ಯಕರ್ತನಿಗೆ ನಾವು ಟಿಕೆಟ್ ನೀಡಿದ್ದು, ಜೆಡಿಎಸ್‌ನ್ನು ಯಾರು ಕೊಂಡುಕೊಳ್ಳುವುದಕ್ಕೆ ಆಗಲ್ಲ ಎಂದರು. ಕೊರೊನಾ ಬಂದಾಗ ಪ್ರಧಾನಿ ಮೋದಿ ಚಪ್ಪಾಳೆ ತಟ್ಟಿ ಅಂದರು, ಆಮೇಲೆ ದೀಪ ಬೆಳಗಿಸಿ ಅಂದರು. ಆ ದೀಪ ಹಚ್ಚಿ ಬಿಜೆಪಿಯವರು ತಮ್ಮ ಜೀವನ ಬೆಳಗಿಸಿಕೊಂಡರು. ಜನರ ಕಷ್ಟಗಳಿಗೆ ದೀಪ ಹಚ್ಚಿ ಬೆಳಕು ನೀಡಲಿಲ್ಲ ಎಂದರು. ಹತ್ತು ವರ್ಷದಿಂದ ಬಿಜೆಪಿ, ಕಾಂಗ್ರೆಸ್‌ನವರು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾರೆ. ಪ್ರತಿವರ್ಷ ಕಾಲುವೆ ದುರಸ್ಥಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರೆ. ಆದರೂ, ಮಳೆ ಬಂದಾಗ ಬೆಂಗಳೂರಿನ ಅನೇಕ ಪ್ರದೇಶಗಳಿಗೆ ನೀರು ನುಗ್ಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಸಭೆಗೆ ಅಡ್ಡಿಪಡಿಸಿದವರನ್ನು ಬಂಧಿಸಿ ಎಂದು ಪೊಲೀಸ್ ಠಾಣೆ ಎದುರು ರಾತ್ರಿವರೆಗೂ ಪ್ರತಿಭಟನೆ ನಡೆಸುವ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ನಾಯಕರು. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯಲ್ಲಿ ತಮ್ಮ ಶಾಸಕರ ಮನೆ, ಪೊಲೀಸ್ ಠಾಣೆ ಸುಟ್ಟವರನ್ನು ಬಂಧಿಸಿ ಎಂದು ಧರಣಿ ನಡೆಸಬೇಕಿತ್ತು ಎಂದರು.
ಕಾಂಗ್ರೆಸ್ ಅಭ್ಯರ್ಥಿ ನಾನು ನೊಂದಿದ್ದೇನೆ, ಬಡ ಕುಟುಂಬಗಳ ರಕ್ಷಣೆಗಾಗಿ ರಾಜಕಾರಣಕ್ಕೆ ಬಂದಿದ್ದೇನೆ ಎಂದು ಹೇಳುತ್ತಾರೆ. ಆದರೆ, ಹಳ್ಳಿಯಲ್ಲಿರುವ ಡಿಕೆ ರವಿ ಅವರ ತಂದೆ-ತಾಯಿಯನ್ನೇ ನೋಡಲಿಲ್ಲ. ಅವರ ಬದುಕಿಗೆ ಒಂದು ದಾರಿ ಮಾಡಿ ಕೊಡಲಾಗಲಿಲ್ಲ. ಈಗ ನಿಮ್ಮ ಕಷ್ಟಗಳನ್ನೆಲ್ಲಾ ಕೇಳ್ತಾರಾ, ಸಮಸ್ಯೆಗಳನ್ನು ಬಗೆಹರಿಸ್ತಾರಾ ಎಂದು ಜನರನ್ನು ಪ್ರಶ್ನಿಸಿದರು.
ನಮ್ಮ ದುಡ್ಡಿನಲ್ಲಿ ಮಹಾರಾಷ್ಟ್ರದವರ ಪ್ರತಿಮೆಯನ್ನು ನಮ್ಮ ನೆಲದಲ್ಲಿ ಬಿಜೆಪಿಯವರು ಸ್ಥಾಪಿಸುತ್ತಾರೆ. 2-3 ತಿಂಗಳಲ್ಲಿ ಬೆಂಗಳೂರನ್ನು ಮಾದರಿ ನಗರವನ್ನಾಗಿ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ, ಮೊನ್ನೆ ಮಳೆ ಬಂದಾಗ ಬೆಂಗಳೂರೇ ಕೊಚ್ಚಿಕೊಂಡು ಹೋಯ್ತು. ಇದೇನಾ ಇವರ ಮಾದರಿ ನಗರ ಎಂದು ಪ್ರಶ್ನಿಸಿದ ಅವರು, 2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ಹಾಗೂ ಮೈಸೂರು ಹೊರವಲಯಗಳ ಅಭಿವೃದ್ಧಿಗೆ 25 ಸಾವಿರ ರೂ. ನೀಡಿದ್ದೇನೆ ಎಂದು ಹೇಳಿದರು.