ಬೆಂಗಳೂರು: "ಈಸ್ಟ್ ಇಂಡಿಯಾ ಕಂಪನಿ ತರ ದರೋಡೆಯನ್ನು ಈಗಿನ ಕಾಂಗ್ರೆಸ್ ಮುಂದುವರಿಸಿದೆ" ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಪದ್ಮನಾಭನಗರದಲ್ಲಿ ಮಾತನಾಡಿದ ಅವರು, "ಹಿಂದಿನ ಕಾಂಗ್ರೆಸ್ ರಾಜಕಾರಣಿಗಳು ಆಸ್ತಿ ಮಾರಿ ಪಕ್ಷ, ದೇಶ ಕಟ್ಟಿದ್ದರು. ಆದರೆ ಈಗಿನವರು ಈಸ್ಟ್ ಇಂಡಿಯಾ ಕಂಪನಿ ಲೂಟಿ ಮಾಡಿದ ಹಾಗೆ ಲೂಟಿ ಮುಂದುವರಿಸಿದ್ದಾರೆ" ಎಂದು ಆರೋಪಿಸಿದ್ದಾರೆ.
ಕೇಂದ್ರ ಸಚಿವ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನಾನು ಕೇಂದ್ರ ಸಚಿವ ಸ್ಥಾನದ ಬಗ್ಗೆ ಚಿಂತೆ ಮಾಡಿಲ್ಲ. ರಾಜ್ಯದಲ್ಲಿ 28ಕ್ಕೆ 28 ಸ್ಥಾನವನ್ನು ಮೈತ್ರಿ ಹಿನ್ನೆಲೆಯಲ್ಲಿ ಗೆಲ್ಲಬೇಕು ಎಂಬುದಷ್ಟೇ ನಮ್ಮ ಯೋಚನೆ. ಈಗ ಕೇಂದ್ರದಲ್ಲಿ ಮಂತ್ರಿ ಆಗಿ ಏನು ಮಾಡ್ತೀರಿ?. ಮಾಧ್ಯಮಗಳಲ್ಲೇ ದೊಡ್ಡ ಸುದ್ದಿಯಾಗಿದೆ. ಕೋಡ್ ಆಫ್ ಕಂಡಕ್ಟ್ ಬಂದರೆ ಕೆಲಸ ಮಾಡುವುದಕ್ಕಾಗುತ್ತದಾ?. ಈಗ ಕೇಂದ್ರದ ಮಂತ್ರಿ ಆಗಿ ಏನು ಮಾಡುವುದು?. ನಾನಂತೂ ಆ ಬಗ್ಗೆ ಯೋಚನೆ ಮಾಡಿಲ್ಲ, ಮಾಹಿತಿಯೂ ಇಲ್ಲ. ಕಾಂಗ್ರೆಸ್ ನಾಯಕರ ದುರಹಂಕಾರ ತಡೆಯಬೇಕಷ್ಟೇ ನಮಗೆ" ಎಂದರು.
"ಪಾಪ ಜೆಡಿಎಸ್ ಮುಗಿಸುವುದಷ್ಟೇ ಇಬ್ಬರು ನಾಯಕರ ಉದ್ದೇಶ ತಾನೇ?. ವಿರೋಧಿಗಳಿಗೂ ಸಹ ದೇವೇಗೌಡರು ಎಂದೂ ಶಾಪ ಕೊಟ್ಟವರಲ್ಲ. ನಾಡಿನ ಜನತೆ ಅವರ ನಡವಳಿಕೆ ಸಮಾಪ್ತಿ ಮಾಡ್ತಾರೆ ಅಷ್ಟೇ ಎಂದು ದೇವೇಗೌಡರು ಹೇಳಿದ್ದಾರೆ. ಈಗಿನ ಕಾಂಗ್ರೆಸ್ ಅಧ್ಯಕ್ಷರು ಕಾಂಗ್ರೆಸ್ 135 ವರ್ಷಗಳ ಇತಿಹಾಸದ ಪಕ್ಷ ಅಂದಿದ್ದಾರಲ್ಲ. ಇವರ ಈಗಿನ ಇತಿಹಾಸ ಏನು?. ಗಾಂಧಿ ಕಟ್ಟಿದ ಕಾಂಗ್ರೆಸ್ನ ಆಗಿನ ಇತಿಹಾಸ ಬೇರೆ" ಎಂದು ಟೀಕಿಸಿದರು.
ಎಲ್ಲಿ ಸ್ಪರ್ಧೆ ಅಂತ ಆಲೋಚನೆ ಮಾಡಿಲ್ಲ: "ಮೈತ್ರಿ ಹಿನ್ನೆಲೆಯಲ್ಲಿ ಹಲವಾರು ನಾಯಕರು ಭೇಟಿ ಆಗ್ತಿದ್ದಾರೆ. ಸಿ ಟಿ ರವಿ ಸೇರಿ ಹಲವರು ಸೌಹಾರ್ದತೆಯಿಂದ ಕೆಲಸ ಮಾಡಬೇಕು ಅಂತ ಭೇಟಿ ಆಗಿದ್ದಾರೆ. ಅಗತ್ಯ ಬಿದ್ದರೆ, ಬಿಜೆಪಿಯಲ್ಲಿ ಮುಂದುವರಿದರೆ ಸುಮಲತಾ ಅವರನ್ನೂ ಭೇಟಿ ಆಗ್ತೇನೆ. ಎಲ್ಲಿ ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ನಾನು ಆಲೋಚನೆ ಮಾಡಿಲ್ಲ. ಕೆಲವರು ತುಮಕೂರು ಅಂತಿದ್ದೀರಿ, ಮಂಡ್ಯ ಅಂತೀರಾ. ಬೆಂಗಳೂರು ಗ್ರಾಮಾಂತರದಲ್ಲಿ ನಾನು ಸ್ಪರ್ಧೆ ಮಾಡಬಹುದು ಅಂತ ಪಾಪ ಕೆಲವರು ನಿದ್ದೆಯೇ ಮಾಡ್ತಿಲ್ಲ" ಎಂದು ಹೆಚ್ಡಿಕೆ ವ್ಯಂಗ್ಯವಾಡಿದರು.