ಬೆಂಗಳೂರು:ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಕೆಲವು ಸ್ವಾಮೀಜಿಗಳ ಹೋರಾಟ ಹಾಗೂ ಅವರ ಬೇಡಿಕೆಗಳ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.
ಮೀಸಲಾತಿಗಾಗಿ ಹೋರಾಟ ವಿಚಾರ: ಹೆಚ್ಡಿಕೆ ಪ್ರತಿಕ್ರಿಯೆ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಕರೆದಿರುವ ವೀಕ್ಷಕರ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾವ ರೀತಿ ಅವರ ಬೇಡಿಕೆ ಈಡೇರಿಸಬೇಕು ಎಂದು ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಈ ವರ್ಗಗಳ ಬೇಡಿಕೆ ಈಡೇರಿಸಲು ತಜ್ಞರ ಜೊತೆ ಚರ್ಚಿಸಿ ತೀರ್ಮಾನಿಸಬೇಕಿದೆ ಎಂದರು.
ಕೇಂದ್ರ ಸರ್ಕಾರದ ವಿರುದ್ಧ ಕಳೆದ 70 ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ನಾನು ಆ ಪ್ರತಿಭಟನೆ ಬಗ್ಗೆ ಈಗ ಮಾತಾನಾಡುವುದಿಲ್ಲ. ಆದರೆ, ಕೂಡಲೇ ಕೇಂದ್ರದ ಸಚಿವರು ಹಾಗೂ ಪ್ರಧಾನ ಮಂತ್ರಿಗಳು ರೈತರೊಂದಿಗೆ ಮಧ್ಯಸ್ಥಿಕೆ ವಹಿಸಿ ಚರ್ಚಿಸಲಿ. ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ಇಂದು ಪಕ್ಷದ ವೀಕ್ಷಕರ ಜೊತೆ ಸಂಘಟನೆ ಕುರಿತು ಸಭೆ ನಡೆಸುತ್ತಿದ್ದೇನೆ ಎಂದ ಹೆಚ್ಡಿಕೆ, ಕೆಲವು ಶಾಸಕರು ಈಗಾಗಲೇ ತುಂಬಾ ದೂರ ಹೋಗಿ ಬಿಟ್ಟಿದ್ದಾರೆ. ಅವರ ಬಗ್ಗೆ ನಾನು ಪದೇ ಪದೇ ಮಾತನಾಡಲು ಹೋಗಲ್ಲ. ಈಗಾಗಲೇ ಹಲವು ಬಾರಿ ಹಲವು ಜನ ಅವರ ಜೊತೆ ಮಾತನಾಡಿದ್ದಾರೆ. ಆದರೆ ಅದು ನನಗೆ ಸಂಬಂಧ ಇಲ್ಲ. ನನ್ನ ಮುಂದೆ ಇರೋದು ಈಗ ಪಕ್ಷ ಸಂಘಟನೆ ಮಾತ್ರ. ಕಾರ್ಯಕರ್ತರ ಜೊತೆಯಲ್ಲಿ ಪಕ್ಷ ಸಂಘಟನೆ ಮಾಡೋದೇ ನನ್ನ ಗುರಿ ಎಂದು ಪಕ್ಷದಿಂದ ದೂರ ಉಳಿದ ಶಾಸಕರಿಗೆ ಟಾಂಗ್ ನೀಡಿದರು.
ಓದಿ:ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ವಿಚಾರ: ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಿಎಂ ಸೂಚನೆ
ಹಾಸನ ವಿಮಾನ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂಗೆ ಬರೆದ ಪತ್ರವನ್ನು ಇಂದು ಶಾಸಕ ಪ್ರೀತಂಗೌಡ ಬಿಡುಗಡೆ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಹಾಸನ ವಿಮಾನ ನಿಲ್ದಾಣ ಕಾಮಗಾರಿ ಸಂಬಂಧ ಸಿಎಂಗೆ ಹಾಸನ ಶಾಸಕರು ಪತ್ರ ಬರೆದಿರೋದು ಅಭಿನಂದನೆ. ತಮ್ಮಿಂದಲೇ ಆಗಿದೆ ಅಂತ ಅವರಿಗೆ ಅನಿಸಿರುವುದು ಒಳ್ಳೆಯದೆ. ಹಾಸನದ ಅಭಿವೃದ್ಧಿ ಬಗ್ಗೆ ಶಾಸಕರಿಗೆ ಅಷ್ಟೊಂದು ಕಾಳಜಿ ಇರುವುದಕ್ಕೆ ಅಭಿನಂದನೆ ಎಂದರು.