ಬೆಂಗಳೂರು : ಸಿ.ಎಂ. ಇಬ್ರಾಹಿಂ ಇಂದು ಜಾತ್ಯತೀತ ಜನತಾ ದಳ(ಜೆಡಿಎಸ್) ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಅವರು ಮರಳಿ ಮನೆಗೆ ಬಂದಿದ್ದು, ಅವರ ನಾಯಕತ್ವದಲ್ಲೇ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಸಿ.ಎಂ. ಇಬ್ರಾಹಿಂರನ್ನು ಭೇಟಿಯಾದ ವೇಳೆ ಹೆಚ್ಡಿಕೆ ಈ ಕುರಿತು ಮಾತನಾಡಿದರು.
ಇಬ್ರಾಹಿಂ ಜನತಾದಳದ ಪ್ರಾಡೆಕ್ಟ್ : ಸಿ.ಎಂ. ಇಬ್ರಾಹಿಂ ದೇವೇಗೌಡರ ಕುಟುಂಬದಲ್ಲಿ ಸಹೋದರನಂತೆ ಇರುವ ನಾಯಕ. ಮಧ್ಯದಲ್ಲಿ ಸಣ್ಣ ಭಿನ್ನಾಭಿಪ್ರಾಯದಿಂದ ದೂರ ಆಗಿದ್ದರು. 1994ರಲ್ಲಿ ಜನತಾ ದಳಕ್ಕೆ ಸೇರ್ಪಡೆಯಾಗಿದ್ದರು. ಇಬ್ರಾಹಿಂ ಜನತಾದಳದ ಪ್ರಾಡೆಕ್ಟ್. ಅವರ ರಾಜಕೀಯ ಜೀವನ ಕಾಕತಾಳೀಯ. ರಾಜ್ಯದ ಉದ್ದಗಲಕ್ಕೂ ದೇವೇಗೌಡರ ಜೊತೆ ಇಬ್ರಾಹಿಂ ಪಕ್ಷಕ್ಕೆ ದುಡಿದಿದ್ದರು. ಅಂದು ನಮ್ಮ ಪಕ್ಷಕ್ಕೆ ಸ್ವತಂತ್ರ ಅಧಿಕಾರ ಸಿಕ್ಕಿತ್ತು. ದೇವೇಗೌಡರು ಸಿಎಂ ಆಗಿದ್ದರು, ಇಬ್ರಾಹಿಂ ರಾಜ್ಯಾಧ್ಯಕ್ಷರಾಗಿದ್ದರು. ಮನೆಗೆ ಮರಳಿ ಬರ್ತಾಯಿದ್ದಾರೆ. ಈಗ ಮತ್ತೆ ಅದೇ ಪರಿಸ್ಥಿತಿ ಉಂಟಾಗಿದೆ. ಇಬ್ರಾಹಿಂ ನಾಯಕತ್ವದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೇವೆ ಎಂದು ಹೆಚ್ಡಿಕೆ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ನಾಡಿನ ಸಾಮರಸ್ಯ ಹಾಳು ಮಾಡುತ್ತಿದೆ:ಅಂದು ಬಾಬರಿ ಮಸೀದಿ ಒಡೆಯಲಾಗಿತ್ತು. ಇಂದು ದೇಶದಲ್ಲಿ ಇರುವ ಸನ್ನಿವೇಶ ಅದಕ್ಕೆ ಹೋಲಿಕೆಯಾಗುತ್ತದೆ. ಇದು ಬಿಜೆಪಿ ಉಂಟು ಮಾಡಿರುವ ವಾತಾವರಣ. ಇಂದು ನಾಡಿನ ಸಾಮರಸ್ಯ ಹಾಳು ಮಾಡುವಂಥ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹಿಜಾಬ್ ಆಯ್ತು, ವ್ಯಾಪಾರ ಮಾಡಬೇಡಿ, ಈಗ ಹಲಾಲ್. ರಾಜ್ಯದಲ್ಲಿ ಮಾತ್ರ ಯಾಕೆ ಇಂಥ ಘಟನೆಗಳು ನಡೆಯುತ್ತಿವೆ?. ರಾಜಕೀಯಕ್ಕಾಗಿ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಬಜರಂಗದಳ, ವಿಶ್ವ ಹಿಂದೂ ಪರಿಷತ್ ಹುಡುಗರನ್ನ ಇಟ್ಕೊಂಡು ಏನ್ ಮಾಡುತ್ತಿದ್ದಾರೆ. ಅದನ್ನ ಮಟ್ಟಹಾಕಲು ಜೆಡಿಎಸ್ ಜವಾಬ್ದಾರಿ ತೆಗೆದುಕೊಂಡಿದೆ ಎಂದು ಹೇಳಿದರು.