ಬೆಂಗಳೂರು : ಹೊಸ ಸಿಎಂಗೆ ರಾಜಕೀಯದಲ್ಲಿ ಅನುಭವ ಇದೆ, ಅವರು ಜನತಾ ಪರಿವಾರದವರು. ಬಿಜೆಪಿ ಪಕ್ಷದಿಂದ ಸಿಎಂ ಆಗಿದ್ದರೂ, ಅವರು ಜನತಾ ಪರಿವಾರದವರು. ನನಗೆ ಒಳ್ಳೆಯ ಸ್ನೇಹಿತರು, ಅವರಿಗೆ ಎಲ್ಲರಿಗೂ ಸಹಕಾರ ನೀಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಕಚೇರಿ ಜೆ.ಪಿ ಭವನದ ಬಳಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿರುವುದರಿಂದ ಜೆಡಿಎಸ್ನವರೇ ಸಿಎಂ ಆಗಿದ್ದಾರೆ ಎಂಬ ಗುಂಗಿನಲ್ಲಿದ್ದೇನೆ. ಯಾಕೆಂದರೆ ಅವರು ಜನತಾ ಪರಿವಾರದಿಂದ ಬಂದವರು. ಹಾಗಾಗಿ, ಅವರು ಎರಡು ವರ್ಷಗಳಲ್ಲಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೇಂದ್ರ ಸರ್ಕಾರ ಸಹಕಾರ ನೀಡಲಿಲ್ಲ. ಯಡಿಯೂರಪ್ಪ ಸಿಎಂ ಎಂಬ ಭಾವನೆಯೇ ಕೇಂದ್ರದವರಿಗೆ ಇರಲಿಲ್ಲ. ಬೊಮ್ಮಾಯಿ ಅವರಿಗೆ ಕೇಂದ್ರ ಸಂಪೂರ್ಣ ಸಹಕಾರ ಕೊಡಬೇಕು ಎಂದು ಹೇಳಿದರು.
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಓದಿ : ಸಂಪುಟ ಸೇರದಿರುವ ನಿರ್ಧಾರದಲ್ಲಿ ಬದಲಾವಣೆ ಇಲ್ಲ: ಜಗದೀಶ್ ಶೆಟ್ಟರ್ ಸ್ಪಷ್ಟನೆ
ಕೇಂದ್ರ ಸರ್ಕಾರದ ಮುಂದೆ ರಾಜ್ಯದ ಹಲವು ಬೇಡಿಕೆಗಳಿವೆ. ಜಿಎಸ್ಟಿ ಪಾಲು ಸೇರಿದಂತೆ ಎಲ್ಲಾ ರೀತಿಯ ಹಣ ಬಿಡುಗಡೆಗೆ ಬಾಕಿಯಿದೆ. ಬೊಮ್ಮಾಯಿ ಅವರಿಗೆ ಕೇಂದ್ರ ಸಹಕಾರ ನೀಡಬೇಕು. ಸದ್ಯ, ಅವರಿಗೆ ಒತ್ತಡ ಇರುವಂತದ್ದು ಗೊತ್ತಿದೆ. ಆದರೂ, ನಿನ್ನೆ ಒಂದಿಷ್ಟು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ ಎಂದರು.
ಸಂಧ್ಯಾ ಸುರಕ್ಷಾ ಯೋಜನೆಯ ಮೊತ್ತವನ್ನು ನಾನು ಸಿಎಂ ಆಗಿದ್ದಾಗಲೇ ಹೆಚ್ಚಳ ಮಾಡಿದ್ದೆ. ಆದರೆ, ಕಳೆದ ಆರೇಳು ತಿಂಗಳಿಂದ ಫಲಾನುಭವಿಗಳಿಗೆ ಹಣವೇ ನೀಡಿಲ್ಲ. ಹಾಗಾಗಿ, ನಿನ್ನೆ ಘೋಷಣೆ ಮಾಡಿರುವ ಯೋಜನೆಗಳು ಘೋಷಣೆಯಾಗಿಯೇ ಉಳಿಯಬಾರದು. ಬಿಎಸ್ವೈ ಸಿಎಂ ಆಗಿದ್ದಾಗ ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ ಒಂದು ಲಕ್ಷ ರೂಪಾಯಿ ಕೊಡುತ್ತೇವೆ ಎಂದಿದ್ದರು. ಆದರೆ, ಇಲ್ಲಿಯವರೆಗೆ ಆ ಹಣ ಬಂದಿಲ್ಲ ಎಂದು ಹೆಚ್ಡಿಕೆ ದೂರಿದರು.
ನೆರೆ ಹಾವಳಿ ವೀಕ್ಷಣೆ ಮಾಡೋದಷ್ಟೆ ಅಲ್ಲ. 2019 ರ ಬೆಳೆ ಪರಿಹಾರ, ಮಳೆಯಿಂದ ಹಾನಿಯಾದವರಿಗೆ ಶೀಘ್ರವಾಗಿ ಪರಿಹಾರ ನೀಡಬೇಕು. ಬಿಜೆಪಿ ಜನರಿಗೆ ಕೊಟ್ಟ ಆಶ್ವಾಸನೆಯನ್ನು ಈಗಲಾದರೂ ಈಡೇರಿಸಲಿ ಎಂದು ಒತ್ತಾಯಿಸಿದರು.