ಬೆಂಗಳೂರು: ಅನಾರೋಗ್ಯದಿಂದಾಗಿ ಕಳೆದ ಕೆಲವು ದಿನಗಳಿಂದ ಜಯನಗರದ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಭಗವಂತ ನನಗೆ ಮೂರನೇ ಜನ್ಮ ಕೊಟ್ಟಿದ್ದಾನೆ. ಎರಡನೇ ಬಾರಿ ನಾನು ಸ್ಟ್ರೋಕ್ನಿಂದ ಗುಣಮುಖನಾಗಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ವೇಳೆ, ಇಂತಹ ಆರೋಗ್ಯ ಸಮಸ್ಯೆ ಇರುವವರು ನಿರ್ಲಕ್ಷಿಸದೇ ಸಕಾಲಕ್ಕೆ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆಗೆ ಒಳಗಾಗುವಂತೆಯೂ ಅವರು ಮನವಿ ಮಾಡಿದರು. ಕಳೆದ 5 ದಿನಗಳಲ್ಲಿ ನನ್ನ ಸ್ನೇಹಿತರಲ್ಲಿ ಅನುಕಂಪ ಮತ್ತು ಭಯದ ವಾತಾವರಣ ಇತ್ತು. ನನ್ನ ಹಿತೈಷಿಗಳಿಗೆ ನನ್ನ ಆರೋಗ್ಯದ ಮಾಹಿತಿ ನೀಡಲು ಮಾಧ್ಯಮದವರು ಶ್ರಮ ಹಾಕಿದ್ದಾರೆ. ಭಗವಂತ, ತಂದೆ ತಾಯಿಯ ಆಶೀರ್ವಾದದಿಂದ ನನಗೆ ಪುನರ್ಜನ್ಮ ಸಿಕ್ಕಿದೆ. ಇದಕ್ಕೆ ಕಾರಣರಾದ ವೈದ್ಯರಿಗೆ ವಿಶೇಷವಾಗಿ ಡಾ.ಸತೀಶ್ ಅವರಿಗೆ ಧನ್ಯವಾದ ತಿಳಿಸಿದರು.
ತೋಟದ ಮನೆಯಲ್ಲಿ ರಾತ್ರಿ ಎರಡು ಗಂಟೆಗೆ ಎಚ್ಚರವಾಯ್ತು. ಭಗವಂತನ ಪ್ರಾರ್ಥನೆ ಮಾಡಿದೆ. ನನ್ನ ಧ್ವನಿಯಲ್ಲಿ ವ್ಯತ್ಯಾಸವಾಗಿದ್ದು ಗೊತ್ತಾಯ್ತು. ಮೊದಲು ಕುಟುಂಬ ವೈದ್ಯರಾದ ಮಂಜುನಾಥ್ ಅವರಲ್ಲಿ ಮಾತನಾಡಿ, ಆನಂತರ ಅಪೊಲೋ ಆಸ್ಪತ್ರೆಯ ವೈದ್ಯರಲ್ಲಿ ಮಾತನಾಡಿದೆ. ಕೇವಲ 20 ನಿಮಿಷದಲ್ಲಿ ಆಸ್ಪತ್ರೆಗೆ ಬಂದೆವು. ಸ್ಟ್ರೋಕ್ ಬಂದಾಗ ವೇಗವಾಗಿ ಆಸ್ಪತ್ರೆಗೆ ಬರಬೇಕು. ಅದು ಬಡವನೇ ಆಗಿರಲಿ ಅಥವಾ ಶ್ರೀಮಂತನೇ ಆಗಲಿ, ಆದಷ್ಟು ಬೇಗ ಆಸ್ಪತ್ರೆಗೆ ಬರಬೇಕು. ನನಗೆ ಮೂರನೇ ಜನ್ಮವನ್ನು ಭಗವಂತ ಕೊಟ್ಟಿದ್ದಾನೆ. ನಾನು ಉಳಿಯಲು ಭಗವಂತ ಮತ್ತು ವೈದ್ಯರೇ ಕಾರಣ ಎಂದು ಹೇಳಿದರು.
ನಾನು ರಾತ್ರಿ ಹೋಗುವ ಬದಲು ಬೆಳಗ್ಗೆ ಹೋಗುತ್ತೇನೆ ಅಂದುಕೊಂಡಿದ್ದರೆ ನಾನಿವತ್ತು ಸರಾಗವಾಗಿ ಮಾತನಾಡಲು ಆಗುತ್ತಿರಲಿಲ್ಲ. ನಾನು ಆಸ್ಪತ್ರೆಗೆ ದಾಖಲಾದಾಗ ನನಗೆ 1 ಗಂಟೆಯೊಳಗೆ ಸ್ಕ್ಯಾನ್, ಚಿಕಿತ್ಸೆ ಎಲ್ಲ ನೀಡಬೇಕಿತ್ತು. ಒಂದು ಕ್ಷಣವೂ ಕೂಡ ನಿರ್ಲಕ್ಷ್ಯ ಮಾಡದೇ ಚಿಕಿತ್ಸೆ ನೀಡಿದರು. ಪರಿಣಾಮವಾಗಿ ನಾನು ಬೆಡ್ ರೆಸ್ಟ್ಗೆ ಒಳಗಾಗುವುದು ತಪ್ಪಿತು. 1 ಗಂಟೆಯಲ್ಲೇ ಚೇತರಿಸಿಕೊಂಡೆ. ಇದಕ್ಕೆಲ್ಲಾ ನಾನು ಸಕಾಲಕ್ಕೆ ಆಸ್ಪತ್ರೆಗೆ ತೆರಳಲು ನಿರ್ಧರಿಸಿದ್ದು ಮತ್ತು ಗೋಲ್ಡನ್ ಪೀರಿಯಡ್ನಲ್ಲೇ ನನಗೆ ಚಿಕಿತ್ಸೆ ಸಿಕ್ಕಿದ್ದು ಕಾರಣ. ಹಾಗಾಗಿ ರಾತ್ರಿ ವೇಳೆ ಆರೋಗ್ಯದಲ್ಲಿ ವ್ಯತ್ಯಾಸವಾದಾಗ ತಡಮಾಡದೇ ಆಸ್ಪತ್ರೆಗೆ ತೆರಳಿ ಎಂದು ಜನರಿಗೆ ಸಲಹೆ ನೀಡಿದರು.
ನನಗೆ ಎರಡು ಬಾರಿ ಹೃದಯದ ವಾಲ್ವ್ ರೀಪ್ಲೇಸ್ಮೆಂಟ್ ಆಗಿದೆ. ಎರಡನೇ ಬಾರಿ ಪಾರ್ಶ್ವವಾಯು ಆಗಿದೆ. ಎರಡನೇ ಬಾರಿ ಸಿಎಂ ಆಗಿದ್ದಾಗ ನನ್ನ ಎಡಭಾಗ ಸ್ವಾಧೀನ ಕಳೆದುಕೊಂಡಿತ್ತು. ಆಗ ವೈದ್ಯರು ಸರಿಯಾದ ಚಿಕಿತ್ಸೆ ನೀಡಿದ ಕಾರಣ ಹುಷಾರಾದೆ. ಈ ಬಾರಿ ಹೆಚ್ಚಾಗಿ ಡ್ಯಾಮೇಜ್ ಆಗಿತ್ತು. ಯಾರಿಗಾದರೂ ಪಾರ್ಶ್ವವಾಯು ಆದಾಗ ಸಮಯ ವ್ಯರ್ಥ ಮಾಡಬೇಡಿ. ಚಂದ್ರಯಾನ ಆಯ್ತು, ಸೂರ್ಯಯಾನವೂ ಆಗ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಪರಿಣಿತ ವೈದ್ಯರಿದ್ದಾರೆ. ಹಾಗಾಗಿ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಆರೋಗ್ಯದಲ್ಲಿ ವ್ಯತ್ಯಾಸವಾದಲ್ಲಿ ಆಸ್ಪತ್ರೆಗೆ ತೆರಳಲು ನಿರ್ಲಕ್ಷ್ಯ ಮಾಡಬೇಡಿ ಎಂದು ಕಿವಿಮಾತು ಹೇಳಿದರು.