ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರದಂತೆ ರಾಜ್ಯದಲ್ಲೂ ಒಬ್ಬ ಅಜಿತ್​ ಪವಾರ್​ ಹುಟ್ಟಿಕೊಳ್ಳಬಹುದು : ಕುಮಾರಸ್ವಾಮಿ ಭವಿಷ್ಯ - kumaraswamy criticizes congress government

ಕಾಂಗ್ರೆಸ್​ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ, ಕಾಂಗ್ರೆಸ್​ನವರು ಚುನಾವಣೆ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಬಗ್ಗೆ ವೀರಾವೇಶದಿಂದ ಜನರ ಮುಂದೆ ಮಾತನಾಡಿದರು. ಆ ವೀರಾವೇಶ ಈಗ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ.

former-cm-hd-kumaraswamy-criticizes-congress-government
ರಾಜ್ಯದ ಆರ್ಥಿಕ ವ್ಯವಸ್ಥೆ ವೆಂಟಿಲೇಟರ್ ಮೇಲೆ ಮಲಗುವ ಕಾಲ ಸನ್ನಿಹಿತ: ಕುಮಾರಸ್ವಾಮಿ ಟೀಕೆ

By

Published : Jul 3, 2023, 6:52 PM IST

Updated : Jul 5, 2023, 7:34 AM IST

ರಾಜ್ಯದಲ್ಲೂ ಒಬ್ಬ ಅಜಿತ್​ ಪವಾರ್​ ಹುಟ್ಟಿಕೊಳ್ಳಬಹುದು : ಕುಮಾರಸ್ವಾಮಿ ಭವಿಷ್ಯ

ಬೆಂಗಳೂರು:ಮಹಾರಾಷ್ಟ್ರ ರಾಜಕಾರಣದ ಬಗ್ಗೆ ನಾವು ಯಾರೂ ಕೂಡ ಊಹೆಯೂ ಮಾಡಿರಲಿಲ್ಲ. ಯಾಕೆಂದರೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಅಂತಹ ವ್ಯವಸ್ಥೆ ಹುಟ್ಟುಹಾಕುವ ಸಾಮರ್ಥ್ಯ ಇರುವಾಗ, ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಒಬ್ಬ ಅಜಿತ್​ ಪವಾರ್​ ಹುಟ್ಟಿಕೊಳ್ಳಲೂಬಹುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್​ಡಿಕೆ, ಮಹಾರಾಷ್ಟ್ರ ರಾಜಕಾರಣದ ಬಗ್ಗೆ ನಾವು ಯಾರೂ ಕೂಡ ಊಹೆಯೂ ಮಾಡಿರಲಿಲ್ಲ. ಅಜಿತ್​ ಪವಾರ್​ ಅಂತವರೇ ಅವರ ಅಂಕಲ್​ಗೆ ಟೋಪಿ ಹಾಕಿ ಹೋಗುತ್ತಾರೆ ಎಂದು ಯಾರಾದ್ರು ಅಂದುಕೊಂಡಿದ್ದರಾ? ಈಗಿನ ರಾಜಕೀಯ ವ್ಯವಸ್ಥೆಯೇ ಹಾಗಿದೆ. ಮುಂದಿನ ಪೀಳಿಗೆಗೆ ರಾಜಕೀಯ ಪಾಠ ಹೇಳಿಕೊಡುವಂತಹ ವಿಷಯವನ್ನು ಇಡಬೇಕು ಎಂದು ಸಭಾಧ್ಯಕ್ಷರು ಹೇಳಿದ್ದಾರೆ. ಆದರೆ ಸದ್ಯದ ವ್ಯವಸ್ಥೆಯಲ್ಲಿ ಯಾವ ರಾಜಕೀಯ ಪಾಠ ಹೇಳುತ್ತಾರೆ ಎಂಬುದೇ ಪ್ರಶ್ನೆಯಾಗಿದೆ. ಯಾಕೆಂದರೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಮಹಾರಾಷ್ಟ್ರದಂತಹ ರಾಜಕೀಯ ವ್ಯವಸ್ಥೆಯನ್ನು ಹುಟ್ಟುಹಾಕುವ ಶಕ್ತಿ ಇರುವಾಗ ಕರ್ನಾಟಕದಲ್ಲೂ ಅಂತಹ ಸಾಧ್ಯತೆಯಿಲ್ಲ ಎಂದು ಯಾರೂ ಹೇಳಲಾಗದು ಎಂದರು.

ನವೆಂಬರ್​ನಲ್ಲಿ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗಲಿದೆ ಎಂಬ ಈ ಹಿಂದಿನ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈ ಬಗ್ಗೆ ಬಿಜೆಪಿ ನಾಯಕರೇ ಬಹಳಷ್ಟು ಜನರು ಹೇಳಿದ್ದಾರೆ. ಬದಲಾವಣೆ ಆಗಬಹುದು ಎಂದಿದ್ದಾರೆ. ಯಾರಿಗೆ ಗೊತ್ತು, ಇಲ್ಲೂ ಒಬ್ಬ ಅಜಿತ್​ ಪವಾರ್​ ಹುಟ್ಟಿಕೊಳ್ಳಲೂಬಹುದು ಕಾದು ನೋಡೋಣ ಎಂದು ಹೇಳಿದರು.

ರಾಜ್ಯಪಾಲರ ಭಾಷಣದ ಬಗ್ಗೆ ಟೀಕೆ:ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿನ ರಾಜ್ಯಪಾಲರ ಭಾಷಣವನ್ನು ಗಮನಿಸಿದರೆ ಈ ಸರ್ಕಾರವು ಆದಷ್ಟು ಬೇಗ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ವೆಂಟಿಲೇಟರ್ (ಐಸಿಯು) ಮೇಲೆ ಮಲಗಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು. ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್​ಡಿಕೆ, ರಾಜ್ಯಪಾಲರ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದರು.

ರಾಜ್ಯಪಾಲರ ಭಾಷಣವು ರಾಜ್ಯದ ಮುಂದಿನ ದರ್ಬರ ದಿನಗಳತ್ತ ಬೊಟ್ಟು ಮಾಡಿದೆ. ಈ ಸರ್ಕಾರ ಐಸಿಯುಗೆ ಹೋಗುವ ಕಾಲವೂ ಶೀಘ್ರವೇ ಬರಲಿದೆ ಎಂದು ಅನಿಸುತ್ತಿದೆ. ಐಸಿಯು, ವೆಂಟಿಲೇಟರ್ ಮೇಲೆ ಈ ಸರ್ಕಾರ ನಡೆಯುವ ಸನ್ನಿವೇಶ ನಿರ್ಮಾಣ ಆಗಬಹುದು. ಅಲ್ಲದೇ ಸಮ್ಮಿಶ್ರ ಸರ್ಕಾರದಂತೆ ಆಗಿರುವ ಈ ಸರ್ಕಾರವೂ ಐಸಿಯು ಪಾಲಾಗುವ ಕಾಲ ಹತ್ತಿರದಲ್ಲೇ ಇದೆ ಎಂದು ಭವಿಷ್ಯ ನುಡಿದರು.

ಪ್ರತಿಪಕ್ಷ ನಾಯಕನಾಗಿ ಟೀಕಿಸಬೇಕೆಂದು ಸರ್ಕಾರವನ್ನು ಟೀಕಿಸುತ್ತಿಲ್ಲ. ಆದರೆ, ನಮ್ಮ ರಾಜ್ಯದ ಆರ್ಥಿಕ ಪರಿಸ್ಥಿತಿ ಏನಿದೆ ಎನ್ನುವುದರ ಬಗ್ಗೆ ಸರ್ಕಾರ ಸತ್ಯ ಮರೆಮಾಚಿದೆ. ಚುನಾವಣೆ ವೇಳೆ ಕಾಂಗ್ರೆಸ್ ಜನರಿಗೆ ಕೊಟ್ಟ ಆಶ್ವಾಸನೆ ಏನು? ಈಗ ಹೇಳುತ್ತಿರುವುದೇನು? ಭವಿಷ್ಯದ ಕರ್ನಾಟಕದ ಬಗ್ಗೆ ಯಾವುದೇ ಒಳನೋಟ ಇಲ್ಲದ ಭಾಷಣ ಇದಾಗಿದೆ. ಈ ಸರ್ಕಾರಕ್ಕೆ ಮುಂದಿನ ಐದು ವರ್ಷಕ್ಕೆ ಏನು ಕೊಡಬೇಕೆಂಬ ದೂರದೃಷ್ಟಿ, ಆತ್ಮವಿಶ್ವಾಸವೇ ಇಲ್ಲ. ರಾಜ್ಯಪಾಲರ ಭಾಷಣ ಇರಲಿ, ಬಜೆಟ್ ಭಾಷಣ ಇರಲಿ, ಸರ್ಕಾರದ ಮುಂದಿನ ಆಶಯಗಳ ಬಗ್ಗೆ ಬೆಳಕು ಚೆಲ್ಲಬೇಕು. ಈ ಭಾಷಣದಲ್ಲಿ ಬೆಳಕಿನ ಮಾತು ಹಾಗಿರಲಿ, ಬರೀ ಕತ್ತಲೇ ತುಂಬಿದೆ ಎಂದು ಟೀಕಿಸಿದರು.

ರಾಜ್ಯಪಾಲರ ಭಾಷಣ ಎಂದರೆ ಹೇಗಿರಬೇಕು? ಅದೂ 135 ಸೀಟುಗಳನ್ನು ಗೆದ್ದ ಪೂರ್ಣ ಬಹುಮತದ ಸರ್ಕಾರದ ರಾಜ್ಯಪಾಲರ ಭಾಷಣ ಎಂದರೆ ಅದಕ್ಕೊಂದು ಗಾಂಭೀರ್ಯ ಬೇಡವೇ ಎಂದ ಹೆಚ್​ಡಿಕೆ, ಆಡಳಿತ ಪಕ್ಷದ ಯಾವ ಶಾಸಕರು ಕೂಡ ರಾಜ್ಯಪಾಲರ ಭಾಷಣ ಕೇಳಿ ಮೇಜು ಕುಟ್ಟಿದ್ದು ನೋಡಲಿಲ್ಲ ಎಂದು ಟಾಂಗ್ ನೀಡಿದರು.

ವೈಎಸ್​ಟಿ ತೆರಿಗೆ ಆರೋಪ:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವೈಎಸ್​ಟಿ (YST) ತೆರಿಗೆ ಶುರುವಾಗಿದೆ ಎಂದು ನೇರ ಆರೋಪ ಮಾಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ವರ್ಗಾವಣೆ ದಂಧೆ ಹಾಗೂ ಭ್ರಷ್ಟಾಚಾರ ಇಲಾಖಾವಾರು ದೊಡ್ಡ ಪ್ರಮಾಣದಲ್ಲಿ ವಿಸ್ತರಣೆ ಆಗುತ್ತಿದೆ. ಸಾರಿಗೆ ಹಾಗೂ ಕಂದಾಯ ಇಲಾಖೆಗಳ (ಸಬ್ ರಿಜಿಸ್ಟ್ರಾರ್) ನಂತರ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಸಲು ಸಿಂಡಿಕೇಟ್ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದೆ ಎಂದು ದೂರಿದರು.

’30 ಲಕ್ಷ ತನ್ನಿ ಅನ್ನುತ್ತಾರೆ- ಕುಮಾರಸ್ವಾಮಿ ಆರೋಪ:ಕಾಸಿಲ್ಲದೇ ಪೋಸ್ಟ್ ಇಲ್ಲ ಎನ್ನುವುದನ್ನು ಈ ಸರ್ಕಾರ ನೀತಿಯನ್ನಾಗಿ ಮಾಡಿಕೊಂಡಿದೆ. ಸದಾ ಮುಖ್ಯಮಂತ್ರಿ ಹಿಂದೆಮುಂದೆ ಹಾಗೂ ಸಿಎಂ ಕಚೇರಿ ಸುತ್ತಾಮುತ್ತ ಓಡಾಡಿಕೊಂಡಿರುವ ಶಾಸಕರೊಬ್ಬರು ಮುಖ್ಯಮಂತ್ರಿಗೆ ಪತ್ರ ಕೊಟ್ಟರೆ, ಬರೀ ಪತ್ರ ಬೇಡ. 30 ಲಕ್ಷ ರೂ. ಕೊಡಬೇಕು ಎಂದು ಸಿಎಂ ಕಚೇರಿಯಲ್ಲಿರುವವರು ಹೇಳ್ತಾರಂತೆ. ಇದು ಈ ಸರ್ಕಾರದ ಹಣೆಬರಹ ಎಂದು ಕುಮಾರಸ್ವಾಮಿ ಆರೋಪಿಸಿದರು.

ಭ್ರಷ್ಟಾಚಾರದ ಬಗ್ಗೆ ದಾಖಲೆ ಇದ್ದರೆ ಕೊಡಲಿ ಎಂದು ಕೆಲವರು ಹೇಳಿದ್ದನ್ನು ಕೇಳಿದ್ದೇನೆ. ದಾಖಲೆ ಕೊಡಿ ಎಂದವರೇ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಶೇ 40ರಷ್ಟು ಕಮಿಷನ್ ಆರೋಪ ಸೇರಿದಂತೆ ಅನೇಕ ಆರೋಪ ಮಾಡಿದ್ದರು. ಅವರು ಆಗ ದಾಖಲೆ ಇಟ್ಟಿದ್ದರಾ? ಈಗ ಇವರದೇ ಸರ್ಕಾರ ಇದೆ, ದಾಖಲೆ ಬಿಡುಗಡೆ ಮಾಡಬಹುದು ಅಲ್ಲವೇ? ಎಂದು ಪ್ರಶ್ನಿಸಿದರು.

Last Updated : Jul 5, 2023, 7:34 AM IST

ABOUT THE AUTHOR

...view details