ಬೆಂಗಳೂರು:ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಮಾಡಿದ ಭಾಷಣವು 'ಕೋವಿಡ್ನಿಂದ, ಕೋವಿಡ್ಗಾಗಿ, ಕೋವಿಡ್ ಗೋಸ್ಕರವೇ' ಮಾಡಿರುವ ಭಾಷಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಮುನ್ನೋಟದಂತೆ ಇರಬೇಕಾಗಿದ್ದ ರಾಜ್ಯಪಾಲರ ಭಾಷಣ 'ನೀರಸ ಮತ್ತು ನಿರಾಶಾದಾಯಕ'ವಾಗಿತ್ತು ಎಂದರು.
ಸರ್ಕಾರದ ಹಿಂದಿನ ಹಾಗೂ ಮುಂದೆ ಮಾಡಬಹುದಾದ ಅಭಿವೃದ್ಧಿಯ ಬಗ್ಗೆ ಭಾಷಣದಲ್ಲಿ ಏನೇನೂ ಹೇಳಿಲ್ಲ. ಸ್ಪಷ್ಟತೆ, ನಿರ್ದಿಷ್ಟ ದಿಕ್ಸೂಚಿ ಇಲ್ಲದ ಭಾಷಣ ಇದು. ರಾಜ್ಯಪಾಲರ ಭಾಷಣದ ಮೂಲಕವೇ ಮುಂದಿನ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳಬೇಡಿ ಎಂದು ಸರ್ಕಾರ ನೇರವಾಗಿ ಜನರಿಗೆ ಹೇಳಿದಂತಿದೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಸಿದ್ದರಾಮಯ್ಯ ಸರ್ಕಾರದ ಹಗಣಗಳ ಪ್ರಸ್ತಾಪ: ಈ ಬಾರಿ ಸದನದಲ್ಲಿ ಅಭಿವೃದ್ಧಿ ವಿಷಯಗಳು ಸೇರಿದಂತೆ ಕೆಲ ಪ್ರಮುಖ ವಿಷಯಗಳನ್ನು ಪ್ರಸ್ತಾಪ ಮಾಡಲಿದ್ದೇನೆ. ಮುಖ್ಯವಾಗಿ ತಮ್ಮದು ಕ್ಲೀನ್ ಸರ್ಕಾರ ಎಂದು ಬಡಾಯಿ ಕೊಚ್ಚಿಕೊಳ್ಳುವ ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆದಿರುವ ಕೆಲ ಭ್ರಷ್ಟ ಹಗರಣಗಳ ಬಗ್ಗೆ ಮಾತನಾಡುವೆ ಎಂದು ಕುಮಾರಸ್ವಾಮಿ ಹೇಳಿದರು.
ಈಗಿರುವ ಬಿಜೆಪಿ ಸರ್ಕಾರದ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿದೆ ಸರಿ. ಆದರೆ, 5 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರದಲ್ಲಿ ಏನೆಲ್ಲಾ ನಡೆಯಿತು ಎನ್ನುವುದು ಕೂಡ ಜನರಿಗೆ ಗೊತ್ತಾಗಬೇಕಲ್ಲವೇ? ಎಂದರು.
ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಗೆ ನೀತಿ: ಮಹದಾಯಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕರ್ನಾಟಕದಲ್ಲಿ ಒಂದು ಮಾತು, ಗೋವಾದಲ್ಲಿ ಇನ್ನೊಂದು ಮಾತು ಹೇಳುತ್ತಿದೆ. ಗೋವಾದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕ ರಾಜ್ಯಕ್ಕೆ ಮಹದಾಯಿ ನೀರು ಕೊಡುವುದಿಲ್ಲ ಎಂದು ಹೇಳುತ್ತಿದೆ. ರಾಹುಲ್ ಗಾಂಧಿ ಅವರೇ ಬಿಡುಗಡೆ ಮಾಡಿದ ಆ ಪಕ್ಷದ ಪ್ರಣಾಳಿಕೆಯಲ್ಲಿ ಹಾಗೆ ಬರೆಯಲಾಗಿದೆ. ಹಾಗಾದರೆ, ಗೋವಾದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಲು ಹೋಗಿದ್ದ ಆ ಪಕ್ಷದ ರಾಜ್ಯ ನಾಯಕರು ಈ ಬಗ್ಗೆ ಏನು ಹೇಳುತ್ತಾರೆ? ಎಂದು ಕುಟುಕಿದರು.
ಗೋವಾದಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕಕ್ಕೆ ಮಹದಾಯಿ ನೀರು ಕೊಡಲ್ಲ ಎಂದು ಹೇಳುತ್ತಿದೆ. ಆದರೆ, ಆ ಪಕ್ಷದ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಮಹದಾಯಿ ನೀರಿಗಾಗಿ ರಾಜ್ಯದಲ್ಲಿ ಪಾದಯಾತ್ರೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಇಬ್ಬಗೆಯ ನೀತಿ ಎಂದರೆ ಇದೇ ಅಲ್ಲವೇ? ಎಂದು ಹೆಚ್‌ಡಿಕೆ ಪ್ರಶ್ನಿಸಿದರು.
ಹಿಜಾಬ್ನಿಂದ ರಾಜಕೀಯ ಲಾಭ:ಮಕ್ಕಳ ಮನಸ್ಸಿನಲ್ಲಿಯೂ ಮತೀಯ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಮಾಡಿಕೊಳ್ಳಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಹಿಜಾಬ್ ಮತ್ತು ಕೇಸರಿ ಶಾಲು ವಿವಾದಗಳ ಹಿಂದಿರುವ ಸಂಘಟನೆಗಳ ಬಗ್ಗೆ ನಾನು ಹೇಳುವುದು ಇಷ್ಟೇ. ರಾಜ್ಯದ ಸಾಮರಸ್ಯವನ್ನು ಹಾಳು ಮಾಡಬೇಡಿ. ಇದು ಶಾಂತಿಯುತ ರಾಜ್ಯ. ಹಾಗೆಯೇ ಮಕ್ಕಳ ಪೋಷಕರಿಗೂ ಹೇಳುತ್ತೇನೆ. ಯಾವುದೇ ಕಾರಣಕ್ಕೂ ಮಕ್ಕಳು ಸ್ವಾರ್ಥ ಸಂಘಟನೆಗಳಿಂದ ಪ್ರೇರೇಪಿತರಾಗದಂತೆ ತಡೆಯಿರಿ. ಇಂತಹ ವಾತಾವರಣ ನಿರ್ಮಾಣ ಆಗಲು ಬಿಟ್ಟದ್ದೇ ಸರ್ಕಾರದ ವೈಫಲ್ಯ. ಉಡುಪಿಯಲ್ಲಿ ಆದ ಘಟನೆಯನ್ನು ಅಲ್ಲೇ ತಡೆದಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದರು.