ಬೆಂಗಳೂರು: ಕಾಸಿಗಾಗಿ ಪೋಸ್ಟಿಂಗ್, ಗುತ್ತಿಗೆದಾರರಿಂದ ಹಣ ಸುಲಿಗೆ ಸೇರಿ ಕಾಂಗ್ರೆಸ್ ಸರ್ಕಾರದ ಮೇಲೆ ಹಲವಾರು ಗಂಭೀರ ಆರೋಪಗಳನ್ನು ಮಾಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು, ರಿಯಲ್ ಎಸ್ಟೇಟ್ ಬಿಲ್ಡರ್ಗಳಿಂದ ಈ ಸರ್ಕಾರದ ಪ್ರಭಾವಿಗಳು 2,000 ರೂಪಾಯಿ ಸುಲಿಗೆ ಮಾಡಲು ಹೊರಟಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
''ಬೆಂಗಳೂರಿನಲ್ಲಿ ದೊಡ್ಡ ಬಿಲ್ಡರ್ಗಳ ಸಭೆ ಮಾಡಿರುವ ಪ್ರಭಾವಿಗಳು, ಲೋಕಸಭೆ ಚುನಾವಣೆಯ ನೆಪ ಇಟ್ಟುಕೊಂಡು ಬಿಲ್ಡರ್ಗಳಿಂದ ಪ್ರತೀ ಚದರ್ ಅಡಿಗೆ 100 ರೂಪಾಯಿ ಲೆಕ್ಕದಲ್ಲಿ ವಸೂಲಿಗೆ ಇಳಿದಿದ್ದಾರೆ. ಆ ಮೂಲಕ ಭರ್ತಿ 2,000 ಕೋಟಿ ರೂಪಾಯಿ ಸಂಗ್ರಹಕ್ಕೆ ಗುರಿ ಇಟ್ಟುಕೊಂಡಿದ್ದಾರೆ ಎಂದು ನೇರ ಆರೋಪ ಮಾಡಿದರು. ಹೆಸರಿಗೆ ʼಇಂಡಿಯಾʼ ಎಂದು ಕೂಟ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿಯೇ ನಾಮಕರಣ ಮಾಡಿಕೊಂಡರು. ಈಗ ಅದೇ ʼಇಂಡಿಯಾʼ ಹೆಸರಿನಲ್ಲಿ ನಾಡಿನ ಸಂಪತ್ತು ಲೂಟಿ ಮಾಡಲು ಹೊರಟಿದ್ದಾರೆ. ಬಿಲ್ಡರ್ಗಳ ಸಭೆ ನಡೆಸಿ ಇಷ್ಟಿಷ್ಟು ಕಪ್ಪ ಒಪ್ಪಿಸಲೇಬೇಕು ಎಂದು ಡಿಮಾಂಡ್ ಮಾಡಿದ್ದಾರೆ. ಅವರಿಗೆ ಜನರು ಪೆನ್ನು ಪೇಪರ್ ಕೊಟ್ಟಿದ್ದು ಈ ರೀತಿ ಸುಲಿಗೆ ಮಾಡಲಿಕ್ಕಾಗಿಯೇ'' ಎಂದು ಪ್ರಶ್ನಿಸಿದರು.
ನೈಸ್ ಅಕ್ರಮದಲ್ಲಿ 2-3 ಲಕ್ಷ ಕೋಟಿ ಮೌಲ್ಯದ ಭೂಮಿ ಗುಳುಂ:ಬೆಂಗಳೂರು-ಮೈಸೂರು ಮೂಲಭೂತ ಕಾರಿಡಾರ್ ಯೋಜನೆ (ನೈಸ್ ರಸ್ತೆ) ಬಹುಕೋಟಿ ರೂಪಾಯಿಗಳ ಅತಿದೊಡ್ಡ ಹಗರಣವಾಗಿದ್ದು, ಸುಮಾರು 2-3 ಲಕ್ಷ ಕೋಟಿ ರೂ. ಮೌಲ್ಯದ ಭೂಮಿಯನ್ನು ಪಟ್ಟಭದ್ರರು ನುಂಗಿದ್ದಾರೆ ಎಂದು ಹೆಚ್ಡಿಕೆ ಆರೋಪಿಸಿದರು. ರೈತರಿಂದ ಕಸಿದುಕೊಂಡಿರುವ ಈ ಭೂಮಿಯನ್ನು ವಾಪಸ್ ಪಡೆದು ರೈತರಿಗೆ ಮರು ಹಸ್ತಾಂತರ ಮಾಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
ನೈಸ್ ಭೂ ಕರ್ಮಕಾಂಡದಲ್ಲಿ ಈ ಸರ್ಕಾರದ ಪ್ರಭಾವಿ ಸಚಿವರೊಬ್ಬರು ನೇರವಾಗಿ ಶಾಮೀಲಾಗಿದ್ದಾರೆ. ಆ ಕಂಪನಿ ಜತೆ ಕೈಜೋಡಿಸಿ ಸಾವಿರಾರು ಕೋಟಿ ರೂ. ಬೆಲೆಯ ರೈತರ ಭೂಮಿಯನ್ನು ಲೂಟಿ ಮಾಡಿದ್ದಾರೆ ಎಂದು ಹೆಚ್ಡಿಕೆ ಗಂಭೀರ ಆರೋಪ ಮಾಡಿದರು. ನನಗೂ ಒಮ್ಮೆ ಪೆನ್ನು ಪೇಪರ್ ಕೊಡಿ ಎಂದು ಚುನಾವಣೆಗೂ ಮುನ್ನ ಜನರಿಗೆ ದುಂಬಾಲು ಬಿದ್ದಿದ್ದರು. ಪೇಪರ್ ಸಿಕ್ಕಿದ ಮೇಲೆ ಜನರ ಸಂಪತ್ತನ್ನು ಎಗ್ಗಿಲ್ಲದೆ ಕೊಳ್ಳೆ ಹೊಡೆಯುತ್ತಿದ್ದಾರೆ. ಅವರೂ ನೈಸ್ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿದರು.
14 ಸಾವಿರ ಎಕರೆ ಹೆಚ್ಚುವರಿ ಭೂಮಿ:ರೈತರಿಂದ ಈ ಯೋಜನೆಗೆ 14 ಸಾವಿರ ಎಕರೆ ಭೂಮಿಯನ್ನು ಹೆಚ್ಚುವರಿಯಾಗಿ ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ. ಅದನ್ನು ಕೂಡಲೇ ವಾಪಸ್ ಪಡೆಯಬೇಕು. ಸಿದ್ದರಾಮಯ್ಯ ಅವರೇ ಎರಡನೇ ಬಾರಿಗೆ ಸಿಎಂ ಆಗಿದ್ದಾರೆ. ಪೂರ್ಣ ಬಹುಮತವೂ ಇದೆ. ರೈತರ ಬಗ್ಗೆ ಕಾಳಜಿ ಇದ್ದರೆ, ಅವರನ್ನು ಉಳಿಸಬೇಕಲ್ಲವೇ? ಹಾಗಿದ್ದರೆ ಕೂಡಲೇ ಕ್ರಮ ತೆಗೆದುಕೊಳ್ಳಿ. ದಮ್ಮು, ತಾಕತ್ತಿನ ಬಗ್ಗೆ ಹೇಳುತ್ತೀರಲ್ಲ. ನಿಮಗೆ ದಮ್ಮು ತಾಕತ್ತು ಇದ್ದರೆ ರೈತರ ಜಮೀನು ವಾಪಸ್ ಪಡೆಯಿರಿ ಎಂದು ಹೆಚ್ಡಿಕೆ ಸವಾಲು ಹಾಕಿದರು.
ಸಿಂಗಾಪುರಕ್ಕೆ ಬಂದಿದ್ದ ನೈಸ್ ಕುಳ:ನಾನೊಮ್ಮೆ ಮುಖ್ಯಮಂತ್ರಿ ಆಗಿದ್ದಾಗ ಸಿಂಗಾಪುರಕ್ಕೆ ಅಧಿಕೃತ ಪ್ರವಾಸಕ್ಕೆ ಹೋಗಿದ್ದೆ. ಅಲ್ಲಿಗೆ ಈ ನೈಸ್ ಕಂಪನಿಯವನು ವ್ಯವಹಾರ ಕುದುರಿಸಲು ಬಂದಿದ್ದರು. ವಿಧಾನಸೌಧದ ಮೂರನೇ ಮಹಡಿಗೆ ಬಾ ಎಂದು ಉಗಿದು ಕಳಿಸಿದ್ದೆ. ಅವತ್ತು ನಾನು ಆ ಪಾಪದ ಕೆಲಸಕ್ಕೆ ಕೈ ಜೋಡಿಸಲಿಲ್ಲ. ಅಂದು ಈ ಬಗ್ಗೆ ನಾನೇನು ಅಂದುಕೊಂಡಿದ್ದೆನೋ ಈಗ ಅದೇ ನಡೆಯುತ್ತಿದೆ. ಟಿ ಬಿ ಜಯಚಂದ್ರ ಅವರು ಕೊಟ್ಟಿರುವ ಸದನ ಸಮಿತಿ ವರದಿ ಇದೆ. ಆ ವರದಿಯಲ್ಲಿ ನೈಸ್ ಅಕ್ರಮದ ವಿರಾಟ್ ರೂಪವೇ ತೆರೆದುಕೊಂಡಿದೆ. ಆಗ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದರೂ ಸದನ ಸಮಿತಿ ವರದಿ ಆಧಾರದ ಮೇಲೆ ಕ್ರಮ ಜರುಗಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು.