ಬೆಂಗಳೂರು: ನಿನ್ನೆಯ ಘಟನೆಗೆ ರೈತರನ್ನು ದೂಷಿಸುವಂತಹ ಹೇಳಿಕೆಗಳು, ಅಭಿಪ್ರಾಯಗಳನ್ನು ಕೇಳಿ ಮನಸ್ಸಿಗೆ ನೋವಾಗಿದೆ. ಘಟನೆ ಯಾಕಾಯಿತು, ಹೇಗಾಯಿತು, ಘಾತುಕ ಶಕ್ತಿಗಳು ಹೇಗೆ ಬಂದವು ಎಂಬುದರ ಕುರಿತು ತನಿಖೆಯಾಗದೆ ರೈತರನ್ನು ದೂಷಣೆ ಮಾಡುವುದು ತಪ್ಪು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಕೆಂಪು ಕೋಟೆಯ ಬಳಿ ನಡೆದ ಹಿಂಸಾಚಾರದ ಕಳಂಕವನ್ನು ದೇಶದ ಯಾರೊಬ್ಬರೂ ರೈತನ ತಲೆಗೆ ಕಟ್ಟಬಾರದು. ರೈತರ ಐತಿಹಾಸಿಕ ಹೋರಾಟದ ವೇಳೆ ದೆಹಲಿಯಲ್ಲಿ ನಡೆದ ಹಿಂಸಾಚಾರ ದುರದೃಷ್ಟಕರ. ರೈತರ ಸೋಗಿನಲ್ಲಿ ಅನ್ಯ ಶಕ್ತಿಗಳು ಇದರಲ್ಲಿ ಸೇರಿರಬಹುದು. ಈಗಾಗಲೇ ರೈತರೂ ಇದನ್ನು ಸ್ಪಷ್ಟಪಡಿಸಿದ್ದಾರೆ. ನ್ಯಾಯವಾದ ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಲು ಚಳಿ, ಗಾಳಿಯನ್ನೂ ಲೆಕ್ಕಿಸದೇ ಹೋರಾಡುತ್ತಿರುವ ರೈತರು ಇಂಥ ಕೃತ್ಯಕ್ಕೆ ಕೈಹಾಕಲಾರರು ಎಂಬುದೂ ಸತ್ಯ ಎಂದಿದ್ದಾರೆ.
ನಾಲ್ವರು ರೈತ ಮುಖಂಡರನ್ನು ಕೊಲ್ಲಲೆಂದು ಸಂಚು ನಡೆಸಿದ ಘಟನೆಗಳು ಈಗಾಗಲೇ ನಡೆದು ಹೋಗಿದೆ. ಅದಕ್ಕೆ ಸಂಬಂಧಪಟ್ಟಂತೆ ಒಬ್ಬ ವ್ಯಕ್ತಿಯನ್ನು ಹಿಡಿದು ರೈತರೇ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ರೈತರ ಹೋರಾಟವನ್ನೇ ತಲೆಕೆಳಗು ಮಾಡಲು ಪ್ರಯತ್ನಗಳು ನಡೆಯದೇ ಇರುತ್ತವೆಯೇ? ಖಂಡಿತವಾಗಿಯೂ ಅನ್ಯ ಶಕ್ತಿಗಳು ಇದರ ಹಿಂದೆ ಇರುವ ಸಾಧ್ಯತೆಗಳಿವೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಇದು ಸೂಕ್ತ ಮಾತುಕತೆ ಮೂಲಕ ಬಗೆಹರಿಯುವ ಸಮಸ್ಯೆ. ಸುಪ್ರೀಂಕೋರ್ಟ್ ಕೂಡ ಇದನ್ನೇ ಹೇಳಿದೆ. ಆದರೆ ಹಾಗೆ ಆಗದೇ ಇರುವುದು ಬೇಸರದ ಸಂಗತಿ. ಈ ಘಟನೆಯನ್ನು ಆಡಳಿತದಲ್ಲಿರುವವರು ತಪ್ಪಿಸಬಹುದಿತ್ತು. ಘಟನೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಈಗಲೂ ಕಾಲ ಮಿಂಚಿಲ್ಲ. ಸೌಹಾರ್ದ ಮಾರ್ಗ ಇದಕ್ಕೆ ಮದ್ದು ಎಂದು ಹೆಚ್ಡಿಕೆ ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಎಂಇಎಸ್ ನಿಷೇಧಕ್ಕೆ ಆಗ್ರಹಿಸುವೆ: ಉದ್ಧವ್ ಠಾಕ್ರೆಗೆ ಶ್ರೀಮಂತ ಪಾಟೀಲ್ ಠಕ್ಕರ್