ಬೆಂಗಳೂರು : ಇಡೀ ದೇಶದಲ್ಲಿ ಹೇಳಿದ್ದನ್ನು ಮಾಡಿ ತೋರಿಸಿದ, ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಏಕೈಕ ನಾಯಕ ಹೆಚ್ ಡಿ ಕುಮಾರಸ್ವಾಮಿ ಮಾತ್ರ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ವೀರಶೈವ ಲಿಂಗಾಯತ ಸಮುದಾಯದ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎರಡು ಸಲ ಮುಖ್ಯಮಂತ್ರಿ ಆಗಿದ್ದಾಗಲೂ ಕುಮಾರಸ್ವಾಮಿ ಅವರು ಮಾತು ಕೊಟ್ಟ ಹಾಗೆ ಎಲ್ಲ ಕೆಲಸಗಳನ್ನು ಮಾಡಿದರು. ಸಾಲಮನ್ನಾ ಮಾಡಿ ಮಾತು ಉಳಿಸಿಕೊಂಡರು. ಹೀಗಾಗಿ ನನ್ನ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗಬೇಕಾದರೆ ಮತ್ತೊಮ್ಮೆ ಈ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎಂದು ಮನವಿ ಮಾಡಿದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಕೂಡ ಕೆಲಸ ಮಾಡುತ್ತೇನೆ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆ. ಪಕ್ಷ ಗೆಲ್ಲಲು ಸಾಧ್ಯವಾದ ಎಲ್ಲ ಕೆಲಸವನ್ನು ಮಾಡುತ್ತೇನೆ. ಮುಖಂಡರು, ಕಾರ್ಯಕರ್ತರು ಎಲ್ಲರೂ ಶಿಸ್ತು, ಪ್ರಾಮಾಣಿಕತೆ, ಬದ್ಧತೆಯಿಂದ ಪಕ್ಷಕ್ಕೆ ದುಡಿಯಬೇಕು. ನಿಸ್ವಾರ್ಥವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.