ಖರ್ಗೆ ಬದಲು ರಾಹುಲ್ ಪಿಎಂ ಆಗಲಿ ಎಂದಿರುವ ಸಿದ್ದರಾಮಯ್ಯರದ್ದು ಸಂಕುಚಿತ ಮನೋಭಾವ : ಹೆಚ್ಡಿಕೆ ಬೆಂಗಳೂರು :ಮಲ್ಲಿಕಾರ್ಜುನ ಖರ್ಗೆ ಬದಲು ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದಿರುವ ಸಿಎಂ ಸಿದ್ದರಾಮಯ್ಯರದ್ದು ಸಂಕುಚಿತ ಮನೋಭಾವ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಜೆ ಪಿ ಭವನದಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ದಲಿತ ಸಮುದಾಯದವರು ಇದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಖರ್ಗೆ ಪಿಎಂ ಅಭ್ಯರ್ಥಿಯಾಗಲಿ ಎಂದು ಹೇಳುತ್ತಾರೆ. ಇಂಡಿಯಾ ಒಕ್ಕೂಟದ ಕೆಲ ಮೈತ್ರಿ ಪಕ್ಷದವರು ಖರ್ಗೆ ಪರ ಬ್ಯಾಟಿಂಗ್ ಮಾಡಿದ್ದಾರೆ. ಆದರೆ ಇಲ್ಲಿ ಅಹಿಂದ ಹೆಸರು ಹೇಳಿಕೊಂಡು ಅಧಿಕಾರ ಹಿಡಿದಿರುವ ಸಿದ್ದರಾಮಯ್ಯ ಏನು ಹೇಳುತ್ತಿದ್ದಾರೆ?. ರಾಹುಲ್ ಗಾಂಧಿ ಪಿಎಂ ಆಗಬೇಕು ಅನುತ್ತೀರಲ್ಲಾ?. ದಲಿತ ಸಮಾಜ ಇದನ್ನು ಗಮನಿಸಬೇಕು ಎಂದರು.
ಅವರಿಗೆ ರಾಹುಲ್ ಗಾಂಧಿ ಋಣ ತೀರಿಸಬೇಕಲ್ಲಾ?. ಕನ್ನಡಿಗ ಪಿಎಂ ಆದರೆ ನನಗೆ ಸಂತೋಷ. ಆದರೆ ಈಗ ಆಗುವ ಪರಿಸ್ಥಿತಿ ಇಲ್ಲ ಬಿಡಿ. ಸಿದ್ದರಾಮಯ್ಯ ಅವರದ್ದು ಒಡೆದು ಆಳುವ ನೀತಿ. ಸಿದ್ದರಾಮಯ್ಯರದ್ದು ಸಂಕುಚಿತ ಮನೋಭಾವ. ನಮ್ಮಲ್ಲಿದ್ದವರು ಗುಳೇ ಹೋಗಿ ಕಾಂಗ್ರೆಸ್ ನಲ್ಲಿ ಜಾಗ ಹಿಡಿದರು. ಕನಿಷ್ಠ ಸೌಜನ್ಯಕ್ಕೆ ಸುಮ್ಮನೆ ಇರಬೇಕಿತ್ತು. ಆ ರೀತಿ ಏಕೆ ಹೇಳಿಕೆ ನೀಡಬೇಕಿತ್ತು. ಅಧಿಕಾರ ಹಿಡಿಯುವ ತನಕ ಅಹಿಂದ, ಅಧಿಕಾರ ಬಂದ ಮೇಲೆ ಅಹಿಂದ ಹಿಂದೆ ಎಂದು ಹೆಚ್ಡಿಕೆ ಟೀಕಿಸಿದರು.
ನಾನು ಎನ್ ಡಿಎ ಒಕ್ಕೂಟದಲ್ಲಿರಬಹುದು. ಈ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟ. ಪ್ರಧಾನಿ ಆಗೋದು ಬಿಡೋದು ಬೇರೆ. ಆದರೆ ಕನ್ನಡಿಗರೊಬ್ಬರು ಪ್ರಧಾನಿಯಾದರೆ ತುಂಬ ಒಳ್ಳೆಯದು. ದಲಿತ ಸಮುದಾಯಗಳು ಇದನ್ನು ಗಮನಿಸಬೇಕು. ಖರ್ಗೆಯವರಿಗೆ ಗೌರವ ತರಲು ಆ ಸಮಾಜ ರಾಜ್ಯಾದ್ಯಂತ ಚುನಾವಣೆ ವೇಳೆ ಓಡಾಡಿದೆ. ಆ ಸಮಾಜದ ಅಧಿಕಾರಿಗಳು ಓಡಾಡಿದ್ರು. ಇಡೀ ರಾಜ್ಯ ಓಡಾಡಿ ಕಾಂಗ್ರೆಸ್ಗೆ ಮತ ಹಾಕಿದ್ರು. ಖರ್ಗೆಯವರನ್ನು ಪ್ರಧಾನಿ ಮಾಡಬೇಕು ಎಂದು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಹೇಳುತ್ತಿವೆ. ಆದರೆ ನೀವು ರಾಹುಲ್ ಪ್ರಧಾನಿ ಆಗಬೇಕು ಅಂತೀರ. ಆ ಮೂಲಕ ದಲಿತ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಅಧಿಕಾರಕ್ಕೆ ಬಂದು ಎಂಟು ತಿಂಗಳು ಆಯ್ತು, ಕಾಂತರಾಜು ವರದಿಯನ್ನು ಏಕೆ ಜಾರಿ ಮಾಡಿಲ್ಲ. ಕಾಂತರಾಜು ವರದಿ ಬಿಡುಗಡೆಗೆ ಕುಮಾರಸ್ವಾಮಿ ಬಿಟ್ಟಿಲ್ಲ ಎಂದು ಆರೋಪ ಮಾಡುತ್ತಿರುತ್ತೀರ. ಈಗ ನಿಮ್ಮ ಸರ್ಕಾರ ಬಂದು ಎಂಟು ತಿಂಗಳು ಆಗಿದೆ. ಇನ್ನೂ ಏಕೆ ವರದಿ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಬಸವರಾಜ ರಾಯರೆಡ್ಡಿ, ಬಿ.ಆರ್. ಪಾಟೀಲ್ ಹಾಗೂ ಆರ್.ವಿ. ದೇಶಪಾಂಡೆಗೆ ಸಿಎಂ ಸಿದ್ದರಾಮಯ್ಯ ವಿಶೇಷ ಹುದ್ದೆ ನೀಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಹೆಚ್.ಡಿ.ಕೆ, ಇದೇನು ಗಂಜಿ ಕೇಂದ್ರನಾ ಎಂದು ವಾಗ್ದಾಳಿ ನಡೆಸಿದರು.
ನಿನ್ನೆ ಸರ್ಕಾರ ಅದ್ಭುತವಾದ ತೀರ್ಮಾನ ತೆಗೆದುಕೊಂಡಿದೆ. 14ನೇ ಬಾರಿ ದಾಖಲೆಯ ಬಜೆಟ್ ಮಂಡನೆ ಮಾಡಿದ ಆರ್ಥಿಕ ತಜ್ಞ ಸಿಎಂಗೆ ಆರ್ಥಿಕ ಸಲಹೆಗಾರನಾಗಿ ಬಸವರಾಜ ರಾಯರೆಡ್ಡಿಯವರನ್ನು ನೇಮಕ ಮಾಡಲಾಗಿದೆ. ಐದು ಗ್ಯಾರಂಟಿಯ ಹೊಡೆತದ ಮಧ್ಯೆ ಅನುಭವದಲ್ಲಿರುವರನ್ನು ಆರ್ಥಿಕ ಸಲಹೆಗಾರರನ್ನಾಗಿ ಮಾಡಿದ್ದರೆ ಒಪ್ಪಬಹುದಿತ್ತು. ಇವೇನು ಗಂಜಿ ಕೇಂದ್ರಗಳಾ?. ಹಲವು ಬಾರಿ ಮಂತ್ರಿ ಆಗಿದ್ದ ಹಿರಿಯ ನಾಯಕ ಆರ್.ವಿ. ದೇಶಪಾಂಡೆಯವರನ್ನು ಆಡಳಿತ ಸುಧಾರಣೆ ಆಯೋಗ ಅಧ್ಯಕ್ಷರನ್ನಾಗಿ ಮಾಡಿದ್ದೀರ. ಈ ಹಿಂದಿನ ಆಯೋಗದ ವರದಿಯನ್ನು ಏನು ಮಾಡಿದ್ದೀರ?. ಪಾಪ ದೇಶಪಾಂಡೆಯವರನ್ನು ಅಲ್ಲಿ ಕೂರಿಸಿದ್ದೀರಿ. ವಿಧಾನಸೌಧದಲ್ಲಿ ಮಾಡಬಾರದ ಕೆಲಸ ಮಾಡಿದ್ದೀರ. ವರ್ಗಾವಣೆ ದಂಧೆ ಮಾಡುತ್ತಿದ್ದೀರ. ದೇಶಪಾಂಡೆಯಿಂದ ಯಾವ ಆಡಳಿತ ಸುಧಾರಣೆ ಮಾಡುತ್ತೀರ? ಎಂದು ಪ್ರಶ್ನಿಸಿದರು.
ಬಿ.ಆರ್. ಪಾಟೀಲ್ರನ್ನು ಸಲಹೆಗಾರರನ್ನಾಗಿ ಮಾಡಿದ್ದೀರಾ. ಸಿಎಂ ಸಿದ್ದರಾಮಯ್ಯಗೆ ಯಾವ ಸಲಹೆ ಕೊಡುತ್ತಾರೆ?. ಸಿದ್ದರಾಮಯ್ಯರ ರಾಜಕೀಯ ಅನುಭವ ಬಿ.ಆರ್. ಪಾಟೀಲ್ಗೆ ಇದೆಯಾ?. ಸಿದ್ದರಾಮಯ್ಯ ಅಹಿಂದದ ಐಕಾನ್ ಆಗಿದ್ದಾರೆ. ಖರ್ಗೆಯಯವರನ್ನು ರಾಜಕೀಯವಾಗಿ ಇಲ್ಲಿಂದ ಖಾಲಿ ಮಾಡಿದ ನಿಮಗೆ ರಾಜಕೀಯ ಸಲಹೆ ಬಿ.ಆರ್. ಪಾಟೀಲ್ ಕೊಡುತ್ತಾರಾ?. 2009ರ ಉಪ ಚುನಾವಣೆಯಲ್ಲಿ ಆಪರೇಷನ್ ಮಾಡಿದಾಗ ಖರ್ಗೆಯವರನ್ನು ಇಲ್ಲಿಂದ ಖಾಲಿ ಮಾಡಿಸಿ ದೆಹಲಿಗೆ ಕಳುಹಿಸಿದ ನಿಮಗೆ ಯಾವ ರಾಜಕೀಯ ಸಲಹೆ ಕೊಡುತ್ತಾರೆ?. ಬಿ.ಆರ್. ಪಾಟೀಲ್ ಅವರನ್ನು ಈಗ ಸಲಹೆಗಾರರನ್ನಾಗಿ ಮಾಡಿದ್ದಕ್ಕೆ ನಿಮಗೆ ಹ್ಯಾಟ್ಸ್ ಆಫ್ ಎಂದು ಕಿಚಾಯಿಸಿದರು.
ಗ್ಯಾರಂಟಿ ಭಜನೆ ಬಿಟ್ಟರೆ ಬೇರೇನು ಆಗಿಲ್ಲ:ಜಾಹೀರಾತು ಮೂಲಕ ಗ್ಯಾರಂಟಿ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಜನ ಎಲ್ಲಿ ಮರೆತು ಬಿಡುತ್ತಾರೆ ಎಂದು ನುಡಿದಂತೆ ನಡೆಯತ್ತಿದ್ದೇವೆ ಎಂದು ನೆನಪು ಮಾಡಲು ಸಾಹಸ ಪಡುತ್ತಿದ್ದಾರೆ. ನುಡಿದಂತೆ ನಡೆದಿದ್ದೇನೆ ಎಂದು ಪುನರುಚ್ಚರಿಸುವ ಸರ್ಕಾರದ ಮೇಲೆ ನನಗೆ ಅನುಕಂಪ ಮೂಡುತ್ತಿದೆ. ಐದು ಗ್ಯಾರಂಟಿಯ ಭಜನೆ ಬಿಟ್ಟರೆ ಬೇರೆ ಯಾವುದರಲ್ಲೂ ಅಭಿವೃದ್ಧಿ ಸಾಧ್ಯವಾಗಿಲ್ಲ ಎಂದು ಹೆಚ್ಡಿಕೆ ಟೀಕಿಸಿದರು.
ಸರ್ಕಾರವು 900 ಕೋಟಿ ರೂ. ಕುಡಿಯುವ ನೀರು ಹಾಗೂ ಮೇವು ಖರೀದಿಗೆ ಹಣ ಇಟ್ಟಿದ್ದು ಬಿಟ್ಟರೆ ಬೇರೆ ಯಾವುದಕ್ಕೂ ಹಣ ಇಟ್ಟಿಲ್ಲ. ಬ್ರಾಂಡ್ ಬೆಂಗಳೂರು ಮಾಡುತ್ತೇವೆ ಅನ್ನುತ್ತಾರೆ. ಆದರೆ ಬೆಂಗಳೂರಿನಲ್ಲಿ ಟನೆಲ್ ರಸ್ತೆ ಮಾಡುವ ಬಗ್ಗೆ ಇಬ್ಬರು ಮಂತ್ರಿಗಳ ನಡುವೆ ಜಟಾಪಟಿ ನಡೆಯುತ್ತಿದೆ. ನಿಮಗೆ ಟನೆಲ್ ರಸ್ತೆ ಮಾಡಲು ಸಮಯ ಇದೆಯಾ?. ಎರಡು ಇಲಾಖೆ ನಡುವೆ ಜಟಾಪಟಿ ಶುರುವಾಗಿದೆ. ಬರಗಾಲಕ್ಕೆ ಏನು ಕೊಟ್ಟಿದ್ದೀರ?. ಎರಡು ಸಾವಿರ ಕೊಡುತ್ತೇವೆ ಎಂದು ಹೇಳಿ ಮೂರು ತಿಂಗಳಾಯ್ತು ಇನ್ನೂ ಕೊಟ್ಟಿಲ್ಲ. ಇದು ನಿಮ್ಮ ಸರ್ಕಾರದ ಏಳು ತಿಂಗಳ ಸಾಧನೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ನಿಮ್ಮ ಖಜಾನೆಯಲ್ಲಿ ದುಡ್ಡಿಲ್ಲ. ಶಾಲೆಗಳಲ್ಲಿ ಶೌಚಾಲಯ ಕ್ಲೀನ್ ಮಾಡಲು ಹಣ ಇಲ್ಲ. ಮಕ್ಕಳಿಂದ ಕ್ಲೀನ್ ಮಾಡಿಸುತ್ತಿದ್ದೀರ. ನೀವು ಮಾಡಿದ ತಪ್ಪಿಗೆ ಪಾಪ ಟೀಚರ್ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದೀರ?. 17000 ಶಾಲೆಗಳಿಗೆ ಕಟ್ಟಡ ಇಲ್ಲ, ಟೀಚರ್ ಕೊರತೆ ಇದೆ. ಸಾವಿರ ಮಕ್ಕಳಿರುವ ಕಡೆ ಇಬ್ಬರು ಟೀಚರ್ ಹಾಕುತ್ತೀರ. ಇಬ್ಬರು ಮಕ್ಕಳು ಇರುವ ಶಾಲೆಗಳಲ್ಲಿ ಮೂರು ಟೀಚರ್ ಹಾಕುತ್ತೀರ. ಇದು ನಿಮ್ಮ ಪಾಲಿಸಿನಾ? ಎಂದು ಪ್ರಶ್ನಿಸಿದರು.
ಎಫ್ಡಿಐ ಪ್ರಮಾಣದಲ್ಲಿ ಇಳಿಕೆ :ಎಫ್ಡಿಐನಲ್ಲಿ ಗಣನೀಯ ಇಳಿಕೆಯಾಗಿದೆ. ಅಮೆರಿಕಕ್ಕೆ ಹೋಗಿ ಬಂದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಕೈಯಲ್ಲಿ ಆಗುತ್ತಿಲ್ಲ. 44% ಎಫ್ ಡಿಐ ಕಡಿಮೆಯಾಗಿದೆ ಎಂದು ಮಧ್ಯವಾರ್ಷಿಕ ವರದಿಯಲ್ಲಿ ಹೇಳಲಾಗಿದೆ. 2022-23ರಲ್ಲಿ ಏಪ್ರಿಲ್-ಸೆಪ್ಟೆಂಬರ್ ವರೆಗೆ 5.3 ಶತಕೋಟಿ ಡಾಲರ್ ಎಫ್ ಡಿಐ ಬಂದಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ 2.8 ಶತ ಕೋಟಿ ರೂ.ಮಾತ್ರ ಎಫ್ ಡಿಐ ಬಂದಿದೆ. ಹೂಡಿಕೆದಾರರಲ್ಲಿ ವಿಶ್ವಾಸದ ಕೊರತೆ ಇದೆ. ಅದಕ್ಕೆ ಬಹುಶಃ ರಾಯರೆಡ್ಡಿಯವರನ್ನು ಸಲಹೆಗಾರರನ್ನಾಗಿ ನೇಮಕ ಮಾಡಿರಬೇಕು. ಈಗ ವಿದ್ಯತ್ ದರ 48 ಪೈಸೆ ಹೆಚ್ಚಳ ಮಾಡಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಟಾಂಗ್ ನೀಡಿದರು.
ಸಂಕ್ರಾಂತಿ ಬಳಿಕ ಸಿಹಿ ಸುದ್ದಿ: ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಭೇಟಿಯಾಗಿ ಸೀಟು ಹಂಚಿಕೆ ವಿಚಾರವಾಗಿ ತೀರ್ಮಾನಿಸಲಾಗಿದೆಯಾ ಎಂಬ ಬಗ್ಗೆ ಪ್ರತಿಕ್ರಿಯಿಸುತ್ತ, ಸಂಕ್ರಾಂತಿ ಆದ ಬಳಿಕ ನಿಮಗೆ ಸಂತೋಷ ಆಗುವ ಸುದ್ದಿ ಕೊಡುತ್ತೇವೆ ಎಂದರು.
ಇದನ್ನೂ ಓದಿ :'ಹಿಂದುಳಿದವರಿಗೆ ಸಮಾನತೆ ದೊರೆತಾಗ ಮಾತ್ರ ಸ್ವಾತಂತ್ರ್ಯ ಸಾರ್ಥಕ': ಸಿಎಂ ಸಿದ್ದರಾಮಯ್ಯ