ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ, ದ್ವೇಷದ ರಾಜಕಾರಣ ಹೆಚ್ಚಾಗಿದ್ದು ಇದೆಲ್ಲವನ್ನೂ ಜನರಿಗೆ ತಿಳಿಸಲು ಇದು ಸಕಾಲವಾಗಿದೆ. ಹಾಗಾಗಿ ಈ ಸಂಬಂಧ ವರಿಷ್ಠರ ಜೊತೆ ಮಾತುಕತೆ ನಡೆಸಲು ನಾಳೆ ದೆಹಲಿಗೆ ತೆರಳುವುದಾಗಿ ಮಾಜಿ ಸಿಎಂ ಡಿವಿ ಸದಾನಂದಗೌಡ ತಿಳಿಸಿದ್ದಾರೆ.
ಸಂಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ದಸರಾ ಪೂಜೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಇದೆ. ಸರ್ಕಾರವು ರೈತರಿಗೆ ಸಹಕಾರ ಕೊಡುತ್ತಿಲ್ಲ, ದ್ವೇಷದ ರಾಜಕಾರಣ ಮಾಡುತ್ತಿದೆ. ತಮ್ಮ ವಿರೋಧಿಗಳನ್ನು ಯಾವ ರೀತಿಯಲ್ಲಿ ಬೇಕಾದರೂ ತೆಗೆದುಕೊಂಡು ಹೋಗುವ ಪರಿಸ್ಥಿತಿ ಇದೆ. ಆಂತರಿಕ ಕಚ್ಚಾಟ ಶುರುವಾಗಿದೆ. ಶಾಮನೂರು ಶಿವಶಂಕರಪ್ಪ, ಸತೀಶ್ ಜಾರಕಿಹೊಳಿ ಸೇರಿದಂತೆ ಅನೇಕರಿಂದ ಆಂತರಿಕ ಕಚ್ಚಾಟ ಉಂಟಾಗಿದೆ. ಆಡಳಿತಕ್ಕೆ ಬಂದ ಇಷ್ಟು ದಿನದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಅವರ ಏಜೆಂಟ್ ಮೂಲಕ ಕಲೆಕ್ಷನ್ ಸೆಂಟರ್ ಮಾಡಿಕೊಂಡಿದೆ. ಇದೆಲ್ಲವನ್ನೂ ರಾಷ್ಟ್ರೀಯ ನಾಯಕರ ಗಮನಕ್ಕೆ ತರಬೇಕಿದೆ. ಜನರಿಗೆ ತಿಳಿಸಲು ಇದು ಅತ್ಯಂತ ಸಕಾಲ. ಈ ಸಂಬಂಧ ನಾಳೆ ದೆಹಲಿಗೆ ಹೋಗಲಿದ್ದೇನೆ ಎಂದರು.
ಕಾಂಗ್ರೆಸ್ ಚುನಾವಣೆ ಹಿನ್ನೆಲೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹಣ ವರ್ಗಾವಣೆ ಮಾಡ್ತಿದೆ. ಅದರ ಬಗ್ಗೆ ಕಾಂಗ್ರೆಸ್ ಮಾತನಾಡ್ತಿಲ್ಲ. ಕಾಂಗ್ರೆಸ್ ನಾಯಕರ ಹಣೆ ಬರಹ ಇಷ್ಟೇ. ಕಾಂಗ್ರೆಸ್ ಮುಕ್ತ ಭಾರತ ಆಗಬೇಕು. ಲೂಟಿ ಹೊಡೆಯುವ ಕೆಲಸ ಮಾಡಲಾಗ್ತಿದೆ. ಅದೆಲ್ಲವನ್ನು ಜನರಿಗೆ ಮುಟ್ಟಿಸುವ ಕೆಲಸ ಆಗಬೇಕಿದೆ. ಆ ನಿಟ್ಟಿನಲ್ಲಿ ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸುತ್ತೇನೆ ಎಂದರು.
ರಾಜ್ಯಾಧ್ಯಕ್ಷ ಆಯ್ಕೆ ಹೈಕಮಾಂಡ್ ಬಿಟ್ಟ ವಿಚಾರ :ರಾಜ್ಯಾಧ್ಯಕ್ಷ ಆಯ್ಕೆ ವಿಚಾರ ಕೇಂದ್ರದ ವರಿಷ್ಠರಿಗೆ ಬಿಟ್ಟ ವಿಚಾರ. ಈಗಾಗಲೇ ವಿಳಂಬ ಅಗಿರೋದು ಸತ್ಯ. ಇದು ಸವಾಲಿನ ಕೆಲಸವಾಗಿದೆ. ಸುದೀರ್ಘವಾದ ಚರ್ಚೆ ಮಾಡುತ್ತೇನೆ. ಶೋಭಾ ಕರಂದ್ಲಾಜೆ ರಾಜ್ಯಾಧ್ಯಕ್ಷೆ ಆಗ್ತಾರಾ ಅನ್ನೋ ವಿಚಾರದಲ್ಲಿ ನಾನು ಏನೂ ಹೇಳಲು ಸಾಧ್ಯವಿಲ್ಲ, ಅವರು ಆಗಬಹುದಾ, ಹೋಗಬಹುದಾ ಅನ್ನೋ ಬಗ್ಗೆ ಚರ್ಚೆ ಮಾಡಲ್ಲ. ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಹೈಕಮಾಂಡ್ ಸೂಕ್ತ ವ್ಯಕ್ತಿಯನ್ನು ನೇಮಕ ಮಾಡಲಿದೆ. ಹಾಗಾಗಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಹಾರಿಕೆ ಪ್ರಶ್ನೆಗಳಿಗೆ ಉತ್ತರ ಕೊಡಲ್ಲ. ಹೈಕಮಾಂಡ್ ಯಾರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೂ ನಮ್ಮೆಲ್ಲರ ಸಹಕಾರ ಇದ್ದೇ ಇರುತ್ತದೆ ಎಂದರು.