ಬೆಂಗಳೂರು: ಭಾರತದ ಒಳಗೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ಐದು ನುಸುಳುಕೋರರ ವಿರುದ್ಧ ಭಾರತೀಯ ಸೇನೆ ಇಂದು ಯಶಸ್ವಿ ಮಿಲಿಟರಿ ಕಾರ್ಯಾಚರಣೆ ನಡೆಸಿದ್ದು, ಎಲ್ಲರನ್ನೂ ಹೊಡೆದುರುಳಿಸಿದೆ. ಕಾಳಗದಲ್ಲಿ ಐವರು ಭಾರತೀಯ ಯೋಧರು ಹುತಾತ್ಮರಾಗಿದ್ದು ತೀವ್ರ ನೋವು ತರಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಭಾರತಕ್ಕೆ ನುಸುಳಲು ಕಾಶ್ಮೀರದ ಅತಿ ಎತ್ತರದ ಹಿಮ ಸುರಿಯುವ ಪ್ರದೇಶವನ್ನು ಉಗ್ರರು ಆಯ್ಕೆ ಮಾಡಿಕೊಂಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಅತ್ಯಂತ ಪ್ರತಿಕೂಲ ವಾತಾವರಣದಲ್ಲೂ ಭಾರತೀಯ ಯೋಧರು ಶೌರ್ಯದಿಂದ ಉಗ್ರರನ್ನು ಹಿಮ್ಮೆಟ್ಟಿಸಿದ್ದಾರೆ ಎಂದಿರುವ ಮಾಜಿ ಸಿಎಂ, ಈ ಕಾಳಗದಲ್ಲಿ ಐವರು ಯೋಧರ ಪ್ರಾಣ ತ್ಯಾಗಕ್ಕೆ ಸಂತಾಪ ಸೂಚಿಸಿದ್ದಾರೆ.