ಬೆಂಗಳೂರು:ಕಾಂಗ್ರೆಸ್ ಪಕ್ಷ ಕೊಟ್ಟ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಬೇಕು. ಇಲ್ಲವಾದಲ್ಲಿ ಅವರು ಅಧಿಕಾರ ಬಿಟ್ಟು ತೊಲಗಬೇಕು ಎಂದು ಮಾಜಿ ಸಿಎಂ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಅರಮನೆ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಸರ್ಕಾರದ ಮೂಗು ಹಿಂಡುವ ಕೆಲಸವನ್ನು ನಾವು ಮಾಡೋಣ. ಉಪವಾಸ ಸತ್ಯಾಗ್ರಹ ಮಾಡುವ ಅವಶ್ಯಕತೆ ಇಲ್ಲ. ಅಧಿವೇಶನ ಆರಂಭದ ದಿನದಿಂದ ನಾವು ಗಾಂಧಿ ಪ್ರತಿಮೆ ಮುಂದೆ ಕೂತು ಪ್ರತಿಭಟನೆ ಮಾಡಬೇಕು ಎಂದು ಕರೆ ನೀಡಿದರು.
ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಸೇರಿ ಒಟ್ಟು 15 ಕೆಜಿ ಅಕ್ಕಿ ಕೊಡಬೇಕು. ನಾನು ಗಾಂಧಿ ಪ್ರತಿಮೆ ಎದುರು ಧರಣಿ ಕೂರುತ್ತೇನೆ. ಸದನದ ಒಳಗೆ ಶಾಸಕರು ಹೋರಾಟ ಮಾಡಿ ಕಾಂಗ್ರೆಸ್ನವರಿಗೆ ಪಾಠ ಕಲಿಸಬೇಕು. ಅಧಿಕಾರ ಮದದಿಂದ ಏನೇನೋ ಗ್ಯಾರಂಟಿ ಕೊಟ್ಟಿರುವ ಸಿದ್ದರಾಮಯ್ಯ ಈಗ ನರೇಂದ್ರ ಮೋದಿ ಮೇಲೆ ಬೊಟ್ಟು ಮಾಡಿ ತೋರಿಸ್ತಿದಾರೆ. ಅಕ್ಕಿ ಸೇರಿದಂತೆ ಐದು ಭರವಸೆಗಳನ್ನು ಈಡೇರಿಸಲೇಬೇಕು. ಹೋರಾಟದ ಮೂಲಕ ಈ ಸರ್ಕಾರಕ್ಕೆ ಪಾಠ ಕಲಿಸಬೇಕಿದೆ. ನಮ್ಮ ಶಾಸಕರು, ಒಂದು ದಿನ ಅಧಿವೇಶನ ನಡೆಸಲು ಬಿಡದೇ ಹೋರಾಟ ಮಾಡಬೇಕು. ರಾಜಕೀಯ ದೊಂಬರಾಟ ಮಾಡಲು ಬಿಡೋದಿಲ್ಲ ಎಂದು ಕಿಡಿಕಾರಿದರು.
ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆದ್ದು ಪ್ರಧಾನಿ ನರೇಂದ್ರ ಮೋದಿಗೆ ನಾವೆಲ್ಲರೂ ಕೊಡುಗೆ ಕೊಡಬೇಕು. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗೋದು ನಿಶ್ಚಿತ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಅಷ್ಟೇ ಸತ್ಯ ಮುಂದಿನ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದು ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗೋದು. ಕಾಂಗ್ರೆಸ್ ಗ್ಯಾರಂಟಿಗಳ ಪರಿಣಾಮ ನಮಗೆ ಹಿನ್ನಡೆ ಆಯ್ತು. ನಾನು ಯಾವುದೇ ವಿಷಯಗಳನ್ನು ಪ್ರಸ್ತಾಪ ಮಾಡೋಕೆ ಹೋಗುವುದಿಲ್ಲ. ಆದರೆ ಕಾಂಗ್ರೆಸ್ನವರು ಕೊಟ್ಟ ಗ್ಯಾರಂಟಿಗಳನ್ನು ಜಾರಿ ಮಾಡಬೇಕು. ಇಲ್ಲ ಅಧಿಕಾರ ಬಿಟ್ಟು ತೊಲಗಬೇಕು ಎಂದು ಆಗ್ರಹಿಸಿದರು.