ಬೆಂಗಳೂರು:ಜನರ ಸಮಸ್ಯೆಗಳನ್ನು ಆಲಿಸಲು ಜೊತೆಯಾಗಿ ಹೋಗೋಣ; ನೀವೂ ಬನ್ನಿ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಆಹ್ವಾನ ನೀಡಿದರು.
ದಾಸರಹಳ್ಳಿ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಮತ್ತು ಬರಗಾಲ ಪರಿಸ್ಥಿತಿ ಅಧ್ಯಯನ ನಡೆಸಿದ ಅವರು, ಕ್ಷೇತ್ರದ ಪರಿಶೀಲನೆ ಮಾಡಿ, ರಸ್ತೆ ಕೆಲಸ ಗಮನಿಸಿದೆ. ಚಿಕ್ಕಬಾಣಾವರ ಕೆರೆ ಯಾವ ಸ್ಥಿತಿಯಲ್ಲಿದೆ ಎಂದು ನೋಡಿದ್ದೇನೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ. ಅವರು ಬೆಂಗಳೂರು ನೋಡುತ್ತಿರುತ್ತಾರೆ. ರಸ್ತೆ ಹಾಳಾಗಿದೆ, ಕುಡಿಯುವ ನೀರಿನ ಸಮಸ್ಯೆ ಇದೆ. ಕೆರೆ ಹೂಳು ತುಂಬಿದೆ. ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಲ್ಲ. ಈ ಕುರಿತು ಶಿವಕುಮಾರ್ ಅವರನ್ನು ಪ್ರಶ್ನಿಸುವುದಾಗಿ ತಿಳಿಸಿದರು.
ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಮುಖ್ಯಮಂತ್ರಿ ನಗರೋತ್ಥಾನ ಅಭಿವೃದ್ಧಿ ಅಡಿಯಲ್ಲಿ 110 ಹಳ್ಳಿಗೆ ಬಿಡುಗಡೆ ಆಗಿದ್ದ ಹಣ ವಾಪಸ್ ಪಡೆದಿದ್ದಾರೆ ಎಂದು ಆಕ್ಷೇಪಿಸಿದರು. ಪೀಣ್ಯ ಕೈಗಾರಿಕಾ ಪ್ರದೇಶವು ಏಷ್ಯದಲ್ಲೇ ಅತಿ ಹೆಚ್ಚು ತೆರಿಗೆ ನೀಡುತ್ತದೆ. ಆ ಪ್ರದೇಶವನ್ನೇ ಸರ್ಕಾರ ಕಡೆಗಣನೆ ಮಾಡಿದೆ. ಕಾವೇರಿ ನೀರು ಸರಬರಾಜು ಸರಿಯಾಗಿ ನಡೆದಿಲ್ಲ. ಒಳಚರಂಡಿ ಸಂಪೂರ್ಣ ಹಾಳಾಗಿದೆ. ರಸ್ತೆ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿಲ್ಲ. ಚಿಕ್ಕಬಾಣಾವರ ಕೆರೆ ಒಳಚರಂಡಿ, ತಾಜ್ಯದಿಂದ ತುಂಬಿದೆ. ಇದರ ಪುನರುಜ್ಜೀವನ ಮಾಡಲು ತ್ವರಿತ ಕೆಲಸಕ್ಕೆ ಮುಂದಾಗಬೇಕಿದೆ. ಕೆಆರ್ಐಡಿಎಲ್ ಮೂಲಕ ಅಭಿವೃದ್ಧಿ ಮಾಡಬೇಕಿದೆ. ಶಿವಕುಮಾರ್ ಅವರು ಉಸ್ತುವಾರಿ ಇದ್ದಾರೆ. ಇದಕ್ಕೆ ಹಣ ಕೊಡಲು ಸಾಧ್ಯವಾಗುವುದಿಲ್ಲವೇ? ಈ ಸರ್ಕಾರ ದಿವಾಳಿ ಆಗಿದೆಯೇ ಎಂದು ಕೇಳಿದರು.