ಬೆಂಗಳೂರು:ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಇಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಮಾತುಕತೆ ನಡೆಸಿದ್ದಾರೆ. ಮಾತುಕತೆಯ ವೇಳೆ ಅಮಿತ್ ಶಾ, "ಆದಷ್ಟು ಬೇಗ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಲಾಗುವುದು. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುವುದು. ಪಕ್ಷ ಸಂಘಟನೆ ನಿಟ್ಟಿನಲ್ಲಿ ಒಂದು ಉತ್ತಮ ತಂಡವನ್ನು ಆಯ್ಕೆ ಮಾಡಲಾಗುವುದು" ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
5 ಗ್ಯಾರಂಟಿಗಳ ಮಾಹಿತಿ ಪಡೆದುಕೊಂಡ ಅಮಿತ್ ಶಾ:ರಾಜ್ಯದಲ್ಲಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಬೊಮ್ಮಾಯಿ ಅವರು ಅಮಿತ್ ಶಾಗೆ ಮಾಹಿತಿ ನೀಡಿದ್ದಾರೆ. ಪ್ರಮುಖವಾಗಿ, ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳ ಬಗ್ಗೆ ಶಾ, ಬೊಮ್ಮಾಯಿ ಬಳಿ ಮಾಹಿತಿ ಕೇಳಿದ್ದಾರೆ. ಯಾವ ರೀತಿ ಪಂಚ ಗ್ಯಾರಂಟಿ ಅನುಷ್ಠಾನವಾಗಿದೆ, ಷರತ್ತುಗಳು, ಅನುದಾನ ಕೊರತೆ, ಗ್ಯಾರಂಟಿಗಳ ಬಗ್ಗೆ ಜನಾಭಿಪ್ರಾಯ ಸಂಬಂಧ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.