ಕರ್ನಾಟಕ

karnataka

ETV Bharat / state

'ನಿಮ್ಮ ತಕ್ಕಡಿ ಸಮವಾಗಿರಲಿ': ನೂತನ ಸ್ಪೀಕರ್​ಗೆ ಮಾಜಿ ಸಿಎಂ ಬೊಮ್ಮಾಯಿ‌ ಸಲಹೆ - ನೂತನ ಸ್ಪೀಕರ್​ ಯುಟಿ ಖಾದರ್

ನೂತನ ಸ್ಪೀಕರ್​ ಆಗಿ ಆಯ್ಕೆಯಾದ ಯುಟಿ ಖಾದರ್​ ಅವರಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಶುಭ ಕೋರಿದರು. ಬಳಿಕ ನ್ಯಾಯಯುತ ಕಲಾಪ ನಡೆಸಿಕೊಡಲು ಸಲಹೆ ನೀಡಿದರು.

ನೂತನ ಸ್ಪೀಕರ್​ಗೆ ಮಾಜಿ ಸಿಎಂ ಬೊಮ್ಮಾಯಿ‌ ಸಲಹೆ
ನೂತನ ಸ್ಪೀಕರ್​ಗೆ ಮಾಜಿ ಸಿಎಂ ಬೊಮ್ಮಾಯಿ‌ ಸಲಹೆ

By

Published : May 24, 2023, 1:57 PM IST

ಬೆಂಗಳೂರು:ವಿಧಾನಸಭೆಯ ಸಭಾಧ್ಯಕ್ಷರಾಗಿ ಶಾಸಕ ಯು.ಟಿ. ಖಾದರ್ ಅವಿರೋಧವಾಗಿ ಆಯ್ಕೆ ಆಗಿರುವುದಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಶುಭ ಕೋರಿ, 'ನಿಮ್ಮ ತಕ್ಕಡಿ ಸಮವಾಗಿ ಇರಲಿ' ಎಂದು ಸಲಹೆ ನೀಡಿದರು.

ವಿಧಾನಸಭೆಯಲ್ಲಿ ಇಂದು ನೂತನ ಸ್ಪೀಕರ್ ಆಯ್ಕೆಯ ಬಳಿಕ ಮಾತನಾಡಿದ ಅವರು, 'ಕರ್ನಾಟಕದ ವಿಧಾನಮಂಡಲ ತನ್ನದೇ ಆದ ಘನತೆ ಹೊಂದಿದೆ. ಇಂತಹ ಮಹತ್ವದ ಸದನದ ಸಭಾಧ್ಯಕ್ಷರಾಗಿ ನೀವು ಆಯ್ಕೆಯಾಗಿರುವುದಕ್ಕೆ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ. ನಿಮಗೆ 20 ವರ್ಷದ ರಾಜಕೀಯ ಅನುಭವ ಇದೆ. ನೀವು ಶಾಸಕರಾಗಿ, ಸಚಿವರಾಗಿ ಕೆಲಸ ಮಾಡುವಾಗ ಯಾವತ್ತೂ ಸಂಯಮ ಕಳೆದುಕೊಳ್ಳದೆ ಕೆಲಸ ಮಾಡಿದ್ದೀರಿ' ಎಂದರು.

'ವಿರೋಧ ಪಕ್ಷದ ಉಪ ನಾಯಕರಾಗಿಯೂ ಸಮರ್ಥವಾಗಿ ಕೆಲಸ ಮಾಡಿದ್ದೀರಿ‌. ಈ ಹಿಂದೆ ಈ ಹುದ್ದೆ ಅಲಂಕರಿಸಿದವರು ಈ ಹುದ್ದೆಯ ಗೌರವ ಹೆಚ್ಚಿಸಿದ್ದಾರೆ. ನೀವು ಕೊಡುವ ತೀರ್ಪು ಇಡೀ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ. ನಿಮ್ಮ ತಕ್ಕಡಿ ಸಮವಾಗಿರಬೇಕು' ಎಂದು ಹೇಳಿದರು.

'ಸಂವಿಧಾನದಲ್ಲಿ ಸಭಾಪತಿಗಳಿಗೆ ವಿಶೇಷ ಸ್ಥಾನ ಇದೆ. ಸರ್ಕಾರದ ಅಳಿವು ಉಳಿವಿನ ತೀರ್ಮಾನ ಆಗಿದೆ. ಕೆಲವು ತೀರ್ಪುಗಳು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದು ಇವೆ. ತಾವು ನೀಡುವ ತೀರ್ಪು ಲ್ಯಾಂಡ್ ಮಾರ್ಕ್ ಆಗುತ್ತದೆ. ನೀವು ನಿಷ್ಪಕ್ಷಪಾತವಾಗಿ ನೀವು ಕೆಲಸ ಮಾಡಿ. ಪ್ರತಿಪಕ್ಷದಲ್ಲಿ ನಿಮ್ಮ ಸ್ನೇಹಿತರು ಹೆಚ್ಚಿದ್ದಾರೆ. ಆಡಳಿತ ಪಕ್ಷದಲ್ಲಿ ನಿಮ್ಮ ನಿಕಟಪೂರ್ವ ಪಕ್ಷದ ಆತ್ಮೀಯರೂ ಇದ್ದಾರೆ. ಇಬ್ಬರನ್ನೂ ಸಮಾನವಾಗಿ ನೋಡಿ' ಎಂದು ಸಲಹೆ ನೀಡಿದರು.

'ಒಂದು ಗಾದೆ ಮಾತಿದೆ. ಅಪೋಜಿಷನ್ ಹ್ಯಾಸ್ ವೇ, ಗವರ್ನಮೆಂಟ್​ ಹ್ಯಾಸ್ ವೇ. ಹೀಗಾಗಿ ಪ್ರತಿಪಕ್ಷಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಬಾರಿ ಹೊಸ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದಿದ್ದಾರೆ. ಅವರಿಗೆ ಮಾತನಾಡಲು ಹೆಚ್ಚಿನ ಅವಕಾಶ ನೀಡಿ ಹೊಸ ವಿಚಾರಗಳು ಹೊರಬರಲಿ' ಎಂದು ಅಭಿಪ್ರಾಯಪಟ್ಟರು.

'ನೀವು ಪ್ರಗತಿಪರರಿದ್ದೀರಿ, ನಿಮ್ಮ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವ ಕೆಲಸ ಮಾಡಿದ್ದೀರಿ. ರಾಜ್ಯದ ವಿಚಾರದಲ್ಲಿಯೂ ನೀವು ಎಲ್ಲ ಸಮುದಾಯಗಳನ್ನೂ ಒಗ್ಗೂಡಿಸಿಕೊಂಡು ಹೋಗುವ ಶಕ್ತಿ ನಿಮ್ಮಲ್ಲಿದೆ. ಆ ಕೆಲಸವನ್ನು ನೀವು ಮಾಡುತ್ತೀರಿ ಎಂಬ ನಂಬಿಕೆ ಇದೆ' ಎಂದು ಮಾಜಿ ಸಿಎಂ ಹೇಳಿದರು.

ಸರ್ಕಾರದ ವಿರುದ್ಧ ಟೀಕೆ:ಇದಕ್ಕೂ ಮೊದಲು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ ಅವರು, ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾಡಿದ್ದಾರೆ ಎಂದು ಆರೋಪಿಸಿದರು.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್​ ಅವರ ಸಮ್ಮುಖದಲ್ಲಿ ನಡೆದ ಹಿರಿಯ ಪೊಲೀಸ್​ ಅಧಿಕಾರಿಗಳ ಸಭೆಯಲ್ಲಿ ಇಬ್ಬರೂ ಎಚ್ಚರಿಕೆ ನೀಡುವ ಮಾತನ್ನಾಡಿದ್ದಾರೆ. ಕೇಸರೀಕರಣ ಮಾಡುವ ಅವಕಾಶ ಕೊಡಲ್ಲ ಎಂದಿದ್ದಾರೆ. ಇಡೀ ದೇಶದಲ್ಲಿ ಕರ್ನಾಟಕ ಪೊಲೀಸ್ ಉತ್ತಮ ಹೆಸರು ಮಾಡಿದೆ. ಆದರೆ, ಇವರು ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದ್ದಾರೆ ಎಂದು ದೂರಿದರು.

ಓದಿ:ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ: ಮಾಜಿ ಸಿಎಂ ಬೊಮ್ಮಾಯಿ‌

ABOUT THE AUTHOR

...view details