ಬೆಂಗಳೂರು:ಬರ ಪರಿಹಾರಕ್ಕೆ ಕೇಂದ್ರ ಒಂದು ಕಂತು ಬಿಡುಗಡೆ ಮಾಡಿದ್ದರೂ, ರಾಜ್ಯ ಸರ್ಕಾರ ನಯಾಪೈಸೆ ಬಿಡುಗಡೆ ಮಾಡಿಲ್ಲ. ತಮ್ಮ ಮೇಲಿನ ಜವಾಬ್ದಾರಿಯನ್ನು ಕೇಂದ್ರದ ಮೇಲೆ ಹಾಕಿದರೆ ರಾಜ್ಯದ ಜನರು ಇವರಿಗೆ ಯಾಕೆ ಅಧಿಕಾರ ಕೊಡಬೇಕು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯದಲ್ಲಿ ಬರಗಾಲ ಬಂದು ಆರು ತಿಂಗಳಾಗಿದೆ. ಕೇಂದ್ರ ಸರ್ಕಾರ ಈಗಾಗಲೇ 360 ಕೋಟಿ ರೂ. ಒಂದು ಕಂತು ಬಿಡುಗಡೆ ಮಾಡಿದ್ದು. ಇನ್ನೊಂದು ಕಂತು ಬಿಡುಗಡೆ ಮಾಡಲಿದೆ. ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ನಯಾಪೈಸೆಯನ್ನು ಬಿಡುಗಡೆ ಮಾಡಿಲ್ಲ ಎಂದಿದ್ದಾರೆ.
ರಾಜ್ಯದ ವಿಪತ್ತು ನಿಧಿಯ ಹಣವನ್ನು ಬಿಡುಗಡೆ ಮಾಡದೇ ಕೇಂದ್ರದ ಕಡೆಗೆ ರಾಜಕೀಯವಾಗಿ ಬೊಟ್ಟು ಮಾಡಲಾಗುತ್ತಿದೆ. ಹಿಂದೆ ನಮ್ಮ ಸರ್ಕಾರ ಇದ್ದಾಗ ಕೇಂದಕ್ಕೆ ಕಾಯದೇ 2500 ಕೋಟಿ ರೂ. ಬಿಡುಗಡೆ ಮಾಡಿರುವುದು ನಮ್ಮ ಕಣ್ಣ ಮುಂದೆಯೇ ಇದೆ. ಹೀಗಿದ್ದರೂ ರಾಜ್ಯ ಸರ್ಕಾರ ಯಾಕೆ ಹಣ ಬಿಡುಗಡೆ ಮಾಡಬಾರದು. ತಮ್ಮ ಮೇಲಿನ ಜವಾಬ್ದಾರಿಯನ್ನು ಕೇಂದ್ರದ ಮೇಲೆ ಹಾಕಿದರೆ ರಾಜ್ಯದ ಜನರು ಇವರಿಗೆ ಯಾಕೆ ಅಧಿಕಾರ ಕೊಡಬೇಕು ಎಂದು ಪ್ರಶ್ನಿಸಿದ್ದಾರೆ.
15ನೇ ಹಣಕಾಸಿನ ಆಯೋಗ ತನ್ನ ರೂಪುರೇಷೆಗಳನ್ನು ತಯಾರು ಮಾಡುವಾಗ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇತ್ತು. ಆಗ ರಾಜ್ಯದ ಪರಿಸ್ಥಿತಿ ಮನವರಿಕೆ ಮಾಡಿಕೊಡದೇ ಇವತ್ತು ರಾಜ್ಯದ ತೆರಿಗೆ ಪಾಲು ಶೇ 4.7 ನಿಂದ ಶೇ 3.6ಕ್ಕೆ ಇಳಿದಿದ್ದರೆ ಅದಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ. ಹಣಕಾಸಿನ ಆಯೋಗ ಸಂವಿಧಾನ ಬದ್ಧವಾಗಿ ರಚಿತವಾಗಿರುವ ಸ್ವತಂತ್ರ ಆಯೋಗ. ಅದಕ್ಕೂ ಕೇಂದ್ರ ಸರ್ಕಾರಕ್ಕೆ ಯಾವುದೇ ನೇರವಾದ ಸಂಬಂಧ ಇರುವುದಿಲ್ಲ. ಇದು ಗೊತ್ತಿದ್ದು ಮುಖ್ಯಮಂತ್ರಿಗಳು ರಾಜಕಾರಣ ಮಾಡುತ್ತಿದ್ದಾರೆ. ಆದಾಗ್ಯೂ 14ನೇ ಹಣಕಾಸಿನಲ್ಲಿ 14,996 ಕೋಟಿ ರೂ. ಮಾತ್ರ ಬಂದಿದೆ. 15ನೇ ಹಣಕಾಸಿನ ಆಯೋಗ ಇದುವರೆಗೂ 1,16,828 ಕೋಟಿ ರೂ. ಬಿಡುಗಡೆ ಮಾಡಿದೆ. 15ನೇ ಹಣಕಾಸು ಆಯೋಗದ ಅವಧಿ 2026ರ ವರೆಗೂ ಇದೆ. ಒಟ್ಟು 2.5 ಲಕ್ಷ ಕೋಟಿಗೂ ಮೀರಿ ತೆರಿಗೆ ಹಂಚಿಕೆ ಬರಲಿದೆ ಎಂದು ವಿವರಿಸಿದ್ದಾರೆ.