ಬೆಂಗಳೂರು:ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದ ಆರೋಪಿಗಳ ವಿರುದ್ಧದ ಕೇಸ್ ವಾಪಸ್ ಪಡೆಯುವುದಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಮೊದಲ ಹೆಜ್ಜೆ ಇಟ್ಟಿದ್ದಾರೆ. ಮುಖ್ಯಮಂತ್ರಿಗಳಿಗೂ ಕೇಸ್ ವಾಪಸ್ಗೆ ಕೆಲ ಸಂಘಟನೆಗಳು ಮನವಿ ಮಾಡಿವೆ. ಇಂತಹ ಕೇಸ್ಗಳ ಕಿಡಿಗೇಡಿಗಳಿಗೆ ಆಶ್ರಯ ಕೊಡುತ್ತೀರೋ ಅಥವಾ ಶಿಕ್ಷೆ ಕೊಡುತ್ತೀರೋ ಎನ್ನುವುದುನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ತಿಳಿಸಬೇಕು. ಒಂದು ವೇಳೆ ವಾಪಸ್ ಪಡೆದಿದ್ದೇ ಆದಲ್ಲಿ ಕಾನೂನಾತ್ಮಕವಾಗಿ ಬಿಜೆಪಿ ಹೋರಾಟ ನಡೆಸಲಿದ್ದು, ಜನರ ಬಳಿಗೂ ವಿಷಯ ತೆಗೆದುಕೊಂಡು ಹೋಗುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ನಡೆಸಿದ್ದ ಇಂತಹ ದುಷ್ಟ ಶಕ್ತಿಗಳಿಗೆ ಸರ್ಕಾರ ಕುಮ್ಮಕ್ಕು ಕೊಡಬಾರದು. ಸರ್ಕಾರ ಯಾವುದೇ ಕಾರಣಕ್ಕೂ ಒತ್ತಡಕ್ಕೆ ಮಣಿಯಬಾರದು. ಅಂದು ನಾವು ಕಟ್ಟಿನಿಟ್ಟಿನ ಕ್ರಮ ಕೈಗೊಂಡ ಕಾರಣ ಗಲಭೆ ನಿಂತಿತು. ಇಲ್ಲದಿದ್ದಲ್ಲಿ ಪರಿಸ್ಥಿತಿ ಬೇರೆಯ ರೀತಿಯೇ ಆಗುತ್ತಿತ್ತು. ಹೊರಗಿನ ದೇಶಗಳ ಶಕ್ತಿಗಳ ಕುಮ್ಮಕ್ಕಿನಿಂದ ಈ ರೀತಿಯ ಕೃತ್ಯಗಳು ನಡೆಯುತ್ತಿವೆ. ಗೃಹ ಸಚಿವರಿಗೆ ಮಾತ್ರವಲ್ಲ, ಸಿಎಂಗೂ ಕೆಲ ಸಂಘಟನೆಗಳೂ ಡಿಜೆ ಹಳ್ಳಿ ಕೆಜಿ ಹಳ್ಳಿ, ಶಿವಮೊಗ್ಗ ಗಲಭೆ ಸೇರಿ ಎಲ್ಲಾ ಕೇಸ್ ವಾಪಸ್ಗೆ ಮನವಿ ಕೊಟ್ಟಿವೆ. ಇಂತಹ ಕೇಸ್ಗಳ ಕಿಡಿಗೇಡಿಗಳಿಗೆ ಆಶ್ರಯ ಕೊಡುತ್ತೀರೋ ಅಥವಾ ಶಿಕ್ಷೆ ಕೊಡುತ್ತೀರೋ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ತಿಳಿಸಬೇಕು ಎಂದು ಆಗ್ರಹಿಸಿದರು.