ಕರ್ನಾಟಕ

karnataka

ETV Bharat / state

ಸರ್ಕಾರ ಆರು ತಿಂಗಳಲ್ಲಿ ಜಾರಿಗೊಳಿಸಿದ ಅಭಿವೃದ್ಧಿ ಯೋಜನೆಗಳ ವರದಿ ನೀಡಲಿ: ಬಸವರಾಜ ಬೊಮ್ಮಾಯಿ

ಜನರಿಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿಲ್ಲ. ಗೃಹ ಲಕ್ಷ್ಮಿಯರ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

former-cm-basavaraja-bommai-reaction-on-state-congress-government
ಸರ್ಕಾರ ಆರು ತಿಂಗಳಲ್ಲಿ ಜಾರಿಗೊಳಿಸಿದ ಅಭಿವೃದ್ಧಿ ಯೋಜನೆಗಳ ವರದಿ ನೀಡಲಿ: ಬಸವರಾಜ ಬೊಮ್ಮಾಯಿ

By ETV Bharat Karnataka Team

Published : Dec 2, 2023, 9:27 PM IST

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಲ್ಲಿ ಬಜೆಟ್​ನಲ್ಲಿ ಘೊಷಿಸಿರುವ ಎಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಮಾಹಿತಿ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಮಾಧ್ಯಮಗಳ ಎದುರು ಮಾತನಾಡಿದ ಅವರು, ಈ ಸರ್ಕಾರ ಬಂದು ಆರು ತಿಂಗಳಾಯಿತು. ಈ ಸರ್ಕಾರದ ಬಗ್ಗೆ ಜನರು ಭ್ರಮ ನಿರಸನಗೊಂಡಿದ್ದಾರೆ‌. ಇವರು ಪದೇ ಪದೆ ಗ್ಯಾರಂಟಿಗಳ ಬಗ್ಗೆ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ‌. ವಾಸ್ತವದಲ್ಲಿ ಜನರಿಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿಲ್ಲ ಎಂದು ಆರೋಪಿಸಿದರು.

ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹತ್ತು ಕೆಜಿ ಅಕ್ಕಿ ಕೊಡುವ ಬದಲು ಕೇಂದ್ರ ಸರ್ಕಾರ ನೀಡುವ ಐದು ಕೆಜಿ ಅಕ್ಕಿಯನ್ನೂ ಕೊಡುತ್ತಿಲ್ಲ. ಅದರ ಹೊರತಾಗಿ ಕಾಳ ಸಂತೆಯಲ್ಲಿ ಮುಕ್ತವಾಗಿ ಮಾರಾಟ ಮಾಡುತ್ತಿದ್ದಾರೆ. ಅದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳದಿರುವುದು ಸರ್ಕಾರ ಶಾಮೀಲಾಗಿದೆ ಅಂತ ಅನುಮಾನ ಬರುತ್ತಿದೆ. ಗೃಹ ಲಕ್ಷ್ಮಿ ಯೋಜನೆ ಸಮೀಕ್ಷೆ ಮಾಡಿದರೆ ಮೊದಲ ತಿಂಗಳು ಕೇವಲ ಶೇ.35% ರಷ್ಟು ಮಹಿಳೆಯರಿಗೆ ಬಂದಿದೆ. ನಂತರದ ಕಂತುಗಳು ಸರಿಯಾಗಿ ಬಂದಿಲ್ಲ. ಗೃಹ ಲಕ್ಷ್ಮಿಯರ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ವಿದ್ಯುತ್ ವಿಚಾರದಲ್ಲಂತೂ ಸರ್ಕಾರ ರೈತರಿಗೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ.‌ ಸಿಎಂ ಸಿದ್ದರಾಮಯ್ಯ ಅವರು ಐದು ಗಂಟೆ ನಿರಂತರ ವಿದ್ಯುತ್ ಕೊಡುವುದಾಗಿ ಹೇಳಿದ್ದಾರೆ. ಆದರೆ, ರೈತರಿಗೆ ಕೇವಲ 3 ಗಂಟೆ ಮಾತ್ರ‌ ವಿದ್ಯುತ್ ಸಿಗುತ್ತಿದೆ. ಆದರೆ, ರಾಜ್ಯ ಕಾಂಗ್ರೆಸ್ ನಾಯಕರು ಸುಮ್ಮನೆ ತೆಲಂಗಾಣಕ್ಕೆ ಹೋಗಿ ಗ್ಯಾರಂಟಿಗಳ ಬಗ್ಗೆ ಪ್ರಚಾರ ಪಡೆಯುತ್ತಿದ್ದಾರೆ‌ ಎಂದು ವಾಗ್ದಾಳಿ ನಡೆಸಿದರು.

ಸಾಲದ ಪ್ರಮಾಣ ಹೆಚ್ಚಾಗಿದೆ: ರಾಜ್ಯ ಸರ್ಕಾರದ ಬಜೆಟ್​ನಲ್ಲಿ ಘೊಷಣೆ ಮಾಡಿರುವ ಎಷ್ಟು ಯೋಜನೆಗಳನ್ನು ಅನುಷ್ಠಾನ ಮಾಡಿದ್ದೀರಿ ಈ ಬಗ್ಗೆ ಸದನದಲ್ಲಿ ಸ್ಪಷ್ಟವಾದ ಮಾಹಿತಿ ನೀಡಬೇಕು. ಕರ್ನಾಟಕದ ಆರ್ಥಿಕವಾಗಿ ಸಬಲವಾಗಿರುವ ರಾಜ್ಯ, ಆದರೆ, ಯಾವುದೇ ಯೋಜನೆಗಳನ್ನು ಜಾರಿಗೆ ತರದ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ನಾವು ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ತಂದಿದ್ದು ಅದರ ಲಾಭ ಪಡೆದು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಎಸ್​ಸಿಪಿ, ಟಿಎಸ್​ಪಿ ಯೋಜನೆಗಳ 11 ಸಾವಿರ ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ. ರಾಜ್ಯದ ಸಾಲದ ಪ್ರಮಾಣ ಹೆಚ್ಚಾಗಿದೆ.‌ ರಿಸರ್ವ್ ಬ್ಯಾಂಕ್ ಸಾಲದ ಸುಳಿಗೆ ಸಿಲುಕಿರುವ ರಾಜಸ್ಥಾನ, ಪಂಜಾಬ್ ಸೇರಿದಂತೆ ಮೂರು ರಾಜ್ಯಗಳಿಗೆ ಎಚ್ಚರಿಕೆ ಕೊಟ್ಟಿದೆ. ನಮ್ಮ ರಾಜ್ಯವನ್ನು ಆ ಪರಿಸ್ಥಿತಿಗೆ ತೆಗೆದುಕೊಂಡು ಹೋಗಬೇಡಿ ಎಂದು ಸಲಹೆ ನೀಡಿದರು.

ವರ್ಗಾವಣೆ ದಂಧೆ ನಿರಂತರವಾಗಿ ನಡೆಯುತ್ತಿದೆ: ರಾಜ್ಯದಲ್ಲಿ ಭ್ರಷ್ಟಾಚಾರ ಎಲ್ಲ ಹಂತದಲ್ಲೂ ನಡೆಯುತ್ತಿದೆ. ಸಣ್ಣ ಪುಟ್ಟ ಕೆಲಸ ಮಾಡಿಕೊಡುವಲ್ಲಿಯೂ ವಸೂಲಿ ನಡೆಯುತ್ತಿದೆ. ವರ್ಗಾವಣೆ ನಿರಂತರವಾಗಿ ನಡೆಯುತ್ತಿದೆ. ನಮ್ಮ ಮೇಲೆ ಶೇ 40ರಷ್ಟು ಆರೋಪ ಮಾಡಿದ್ದರು. ಈಗ ಶೇ 50ರಷ್ಟು ಕಮಿಷನ್ ನೇರವಾಗಿಯೇ ಭ್ರಷ್ಟಾಚಾರ ನಡೆಯುತ್ತಿದೆ. ಕಮಿಷನ್ ಆರೋಪದ ಬಗ್ಗೆ ತನಿಖೆ ನಡೆಸಲು ಸರ್ಕಾರ ಆಯೋಗ‌ ರಚನೆ ಮಾಡಿದೆ. ಆ ಆಯೋಗ ಪ್ರಾಮಾಣಿಕವಾಗಿ ಎಲ್ಲ ಪ್ರಕರಣಗಳ ತನಿಖೆ ನಡೆಸಲಿ ಎಂದು ಹೇಳಿದರು.

ರೈತರಿಗೆ ಅವಮಾನ: ಬರ ನಿರ್ವಹಣೆ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರಿಗೆ ಬರ ಪರಿಹಾರವಾಗಿ ಎರಡು ಸಾವಿರ ರೂ. ನೀಡುತ್ತೇನೆ ಎನ್ನುವುದು ನಾಚಿಕೆಗೇಡು. ಇದು ರೈತರಿಗೆ ಮಾಡುವ ಅವಮಾನ. ನಮ್ಮ ಅವಧಿಯಲ್ಲಿ ಪ್ರವಾಹ ಬಂದಾಗ ನಾವು‌ ಮೊದಲು‌ ಪರಿಹಾರ ನೀಡಿ ನಂತರ ಕೇಂದ್ರದ ಅನುದಾನ ಪಡೆದಿದ್ದೆವು. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ರಾಜ್ಯ ಸರ್ಕಾರದ ಎನ್​ಡಿಆರ್​ಎಫ್ ನಿಧಿಯಲ್ಲಿ ಎಷ್ಟು ಹಣ ಇದೆ ಅದನ್ನು ಮೊದಲು ರೈತರಿಗೆ ನೀಡಲಿ. ಅದನ್ನು ಬಿಟ್ಟು ಅನಗತ್ಯವಾಗಿ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ನಾವು ಕೊಡುತ್ತಿದ್ದ ಕಿಸಾನ್ ಸಮ್ಮಾನ್ ಯೋಜನೆ 4000 ರೂಗಳನ್ನು ನಿಲ್ಲಿಸಲಾಗಿದೆ. ರೈತರಿಗೆ ಡಿಸೇಲ್ ಸಬ್ಸಿಡಿ ಕೊಡುವುದನ್ನು ನಿಲ್ಲಿಸಲಾಗಿದೆ. ರೈತರ ಮಕ್ಕಳಿಗೆ ವಿದ್ಯಾನಿಧಿ ನೀಡಿರುವುದನ್ನು ನಿಲ್ಲಿಸಲಾಗಿದೆ. ರೈತರು ಸಂಕಷ್ಟದಲ್ಲಿದ್ದಾಗ ಸರ್ಕಾರ ನೆರವಿಗೆ ಬರಬೇಕು. ಇಲ್ಲದಿದ್ದರೆ ಅದು ಜೀವಂತ ಸರ್ಕಾರ ಅನಿಸುವುದಿಲ್ಲ ಎಂದು ಟೀಕಿಸಿದರು.

ಇದನ್ನೂ ಓದಿ:ಡಿ.4 ರಂದು ರೈತರಿಂದ ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ: ಕೋಡಿಹಳ್ಳಿ ಚಂದ್ರಶೇಖರ್

ABOUT THE AUTHOR

...view details