ಬೆಂಗಳೂರು :17,18 ರಂದು ಕಾಂಗ್ರೆಸ್ ರಾಜಕೀಯ ಸಭೆಯಲ್ಲಿ ಅಧಿಕಾರ ದುರುಪಯೋಗ ಆಗಿದೆ. ಮಾನ ಮರ್ಯಾದೆ ಬಿಟ್ಟು ಪ್ರಿನ್ಸಿಪಲ್ ಸೆಕ್ರೆಟರಿಯಂಥ ಅಧಿಕಾರಿಗಳನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ಇವರನ್ನ ರಾಜ್ಯ ಅಭಿವೃದ್ದಿ ಮಾಡಲು ಜನ ಆರಿಸಿ ಕಳುಹಿಸಿದ್ದಾರೆ. ಹಿಂದೆಂದೂ ಕೇಳರಿಯದಂತಹ ಸೇವಕರಂತೆ ಐಎಎಸ್ ಅಧಿಕಾರಿಗಳನ್ನ ಎಲ್ಲೂ ನೇಮಕ ಮಾಡಿಲ್ಲ. ಪ್ರೊಟೋಕಾಲ್ ಅಧಿಕಾರಿಗಳನ್ನ ಬಿಟ್ಟು ಇವರನ್ನ ಆಯ್ಕೆ ಮಾಡಿದ್ದಾರೆ. ರಾಜ್ಯದಲ್ಲಿ ಕೊಲೆಗಳಾಗ್ತಿವೆ. ಆ ಬಗ್ಗೆ ಗಮನ ಇಲ್ಲ. ಇದನ್ನೆಲ್ಲ ಬಿಟ್ಟು ರಾಜಕೀಯ ವ್ಯಕ್ತಿಗಳಿಗೆ ರಾಜಮರ್ಯಾದೆ ಕೊಟ್ಟಿರೋದು ಖಂಡನೀಯ ಎಂದು ವಿಧಾನಸೌಧ ಲಾಂಜ್ನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಸೇಡಿನ ರಾಜಕೀಯ ಮಾಡ್ತಿದೆ. ಇದು ದಮನಕಾರಿ ನೀತಿ. ಸ್ಪೀಕರ್ ಹುದ್ದೆ ದುರ್ಬಳಕೆ ಮಾಡಿಕೊಂಡಿದ್ದಾರೆ.ನಾವು ನ್ಯಾಯವನ್ನ ಕೇಳಿದ್ವಿ, ಆದರೆ ಕೊಡ್ಲಿಲ್ಲ. ಕಾಂಗ್ರೆಸ್ ಪಕ್ಷದ ಔತಣಕೂಟಕ್ಕೆ ಹೋಗಿ ಬಂದಿದ್ದಾರೆ. ಸ್ಪೀಕರ್ ಸ್ಥಾನದ ಗೌರವ ಹರಾಜಾಗಿದೆ. ಅವಿಶ್ವಾಸಕ್ಕೆ ಜೆಡಿಎಸ್ ಬೆಂಬಲ ಕೊಟ್ಟಿದ್ದಾರೆ. ಸ್ಪೀಕರ್ ವಿರುದ್ಧ ಅವಿಶ್ವಾಸ ಮಂಡನೆಗೆ ಮುಂದಾಗಿದ್ದೇವೆ. ನಮ್ಮ ಸದಸ್ಯರಿಗೆ ಶಿಕ್ಷೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಸರ್ವಾಧಿಕಾರಿ, ಹಿಟ್ಲರ್ ಧೋರಣೆ ಅನುಸರಿಸುತ್ತಿದೆ.
ನಮ್ಮ ಶಾಸಕರ ಅಮಾನತು ಖಂಡನೀಯ. ಕಾಂಗ್ರೆಸ್ನವರು ಸ್ಪೀಕರ್ ಮೈಕ್ ಕಿತ್ತು ಹಾಕಿದ್ರು. ಸಿದ್ದರಾಮಯ್ಯ ವಿಧಾನಸಭೆ ಬಾಗಿಲು ಒದ್ದಿದ್ರು. ಆಗ ಇವ್ರನ್ನ ಅಮಾನತು ಮಾಡಿರಲಿಲ್ಲ. ಈಗ ಸೇಡಿನ ರಾಜಕಾರಣ ಮಾಡ್ತಿದ್ದಾರೆ. ವಿಪಕ್ಷಗಳನ್ನ ಹತ್ತಿಕ್ಕಲು ದಮನಕಾರಿ ನೀತಿ ಅನುಸರಿಸುತ್ತಿದ್ದಾರೆ. ಇವರಿಗೆ ಜನ ತಕ್ಕಪಾಠ ಕಲಿಸ್ತಾರೆ. ಸ್ಪೀಕರ್ ಇದನ್ನ ಎದುರಿಸಬೇಕಿತ್ತು. ಆದರೆ, ಡೆಪ್ಯೂಟಿ ಸ್ಪೀಕರ್ ಅವರನ್ನ ಕೂರಿಸಿ ಸ್ಪೀಕರ್ ಎದ್ದು ಹೋಗಿದ್ದಾರೆ. ರುದ್ರಪ್ಪ ಲಮಾಣಿಗೆ ಅವಮಾನ ಆಗಿದ್ರೆ ಅದಕ್ಕೆ ಕಾಂಗ್ರೆಸ್ ಕಾರಣ. ಅವರನ್ನ ಮಂತ್ರಿಯನ್ನಾಗಿ ಮಾಡಬೇಕಿತ್ತು. ಮಾಡದೇ ಅವಮಾನ ಮಾಡಿದ್ದಾರೆ. ನಮ್ಮ ಶಾಸಕರನ್ನ ಹೊರಗೆ ಹಾಕಿದ್ರೆ, ನಾವೂ ಕೂಡ ಪ್ರೊಟೆಸ್ಟ್ ಮಾಡ್ತೀವಿ. ಈ ಹೋರಾಟ ಜನರ ಬಳಿಗೆ ತೆಗೆದುಕೊಂಡು ಹೋಗ್ತೀವಿ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ:ವಿಧಾನಸೌಧದ ಕೆಂಗಲ್ ಗೇಟ್ನ ದ್ವಾರದಲ್ಲಿ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದರು. ಹಿರಿಯ ಶಾಸಕರಾದ ಸುರೇಶ್ ಕುಮಾರ್, ವಿ. ಸುನೀಲ್ ಕುಮಾರ್, ಮುನಿರತ್ನ, ಆರ್. ಅಶೋಕ್, ಅರವಿಂದ್ ಬೆಲ್ಲದ್, ಮಹೇಶ್ ಟೆಂಕಿನಕಾಯಿ, ಧೀರಜ್ ಮುನಿರಾಜು, ಚನ್ನಬಸಪ್ಪ, ಜ್ಯೋತಿ ಗಣೇಶ್, ಸಿ. ಕೆ ರಾಮಮೂರ್ತಿ ಮತ್ತಿತರ ಶಾಸಕರು ಪ್ರತಿಭಟನೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ದೋಖಾ, ದೋಖಾ ಕಾಂಗ್ರೆಸ್ ದೋಖಾ, ಮೋಸ, ಮೋಸ ಕಾಂಗ್ರೆಸ್ ಮೋಸ ಎಂದು ಘೋಷಣೆ ಕೂಗಿದರು.