ಕರ್ನಾಟಕ

karnataka

ETV Bharat / state

ಕೈಗಾರಿಕೋದ್ಯಮಿಗಳ ಪ್ರತಿಭಟನೆ ವಿದ್ಯುತ್ ನೀತಿ ಹಳಿ ತಪ್ಪಿರುವುದಕ್ಕೆ ಸಾಕ್ಷಿ: ಬಸವರಾಜ ಬೊಮ್ಮಾಯಿ

ರಾಜ್ಯ ಸರ್ಕಾರದ ವಿದ್ಯುತ್​ ನೀತಿ ಗ್ರಾಹಕರು ಮತ್ತು ಕೈಗಾರಿಕೋದ್ಯಮಿಗಳಿಗೆ ಮಾರಕವಾಗಿರುವುದು ದುರ್ದೈವ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

former-cm-basavaraj-bommai-slams-state-govt
ಕೈಗಾರಿಕೋದ್ಯಮಿಗಳ ಪ್ರತಿಭಟನೆ.. ವಿದ್ಯುತ್ ನೀತಿ ಹಳಿ ತಪ್ಪಿರುವುದಕ್ಕೆ ಸಾಕ್ಷಿ : ಬಸವರಾಜ ಬೊಮ್ಮಾಯಿ ಟೀಕೆ

By

Published : Jun 22, 2023, 9:45 PM IST

ಬೆಂಗಳೂರು: ರಾಜ್ಯ ಸರ್ಕಾರದ ವಿದ್ಯುತ್ ನೀತಿ ಖಂಡಿಸಿ ಮೊದಲ ಬಾರಿಗೆ ಕೈಗಾರಿಕೋದ್ಯಮಿಗಳು ಮುಷ್ಕರ ನಡೆಸಿರುವುದು ರಾಜ್ಯದ ವಿದ್ಯುಚ್ಛಕ್ತಿ ನೀತಿ ಹಳಿ ತಪ್ಪಿರುವುದಕ್ಕೆ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕರ್ನಾಟಕ ಕೈಗಾರಿಕೆಯಲ್ಲಿ ಅತ್ಯಂತ ಮುಂದುವರೆದ ರಾಜ್ಯ. ಇಲ್ಲಿ ಸಣ್ಣ ಉದ್ಯಮಗಳಿಂದ ಹಿಡಿದು ‌ಬೃಹತ್ ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿದ್ಯುತ್ ನೀತಿ ಗ್ರಾಹಕರು ಹಾಗೂ ಕೈಗಾರಿಕೋದ್ಯಮಿಗಳಿಗೆ ಮಾರಕವಾಗಿದೆ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಸಾಮಾನ್ಯ ಜನರಿಂದ ಹಿಡಿದು ಕೈಗಾರಿಕೆಗಳಿಗೂ ವಿದ್ಯುತ್ ‌ಕ್ಷಾಮ ತಲೆದೋರುವ ಸಾಧ್ಯತೆ ಇದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಬೇಕಾಗಿರುವ ಹಣಕಾಸು ಬಿಡುಗಡೆ ಮಾಡಬೇಕು ಹಾಗೂ ವಿದ್ಯುತ್ ಬಳಕೆದಾರರ ಮೇಲಿನ ಹೊರೆ ಕಡಿಮೆ ಮಾಡಬೇಕು.

ಪೂರ್ವ ತಯಾರಿ‌ ಇಲ್ಲದೆ ಗ್ಯಾರಂಟಿ ಜಾರಿ ಮಾಡಿದರೆ ಅದರ ಎಲ್ಲ ಭಾರವೂ ಜನಸಾಮಾನ್ಯರ ಮೇಲೆ ಬೀಳುತ್ತದೆ. ಇದನ್ನು ತಪ್ಪಿಸಬೇಕು. ಈಗಿರುವ ಲೋಪವನ್ನು ರಾಜ್ಯ ಸರ್ಕಾರ ಸರಿಪಡಿಸಲಿ ಎಂದು ಸಲಹೆ ನೀಡಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ :ಕಾಂಗ್ರೆಸ್​ ನೀಡಿರುವ ಗ್ಯಾರಂಟಿ ಭರವಸೆಯಂತೆ ಅಕ್ಕಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ನಮ್ಮನ್ನು ದಮನ ಮಾಡಲು ಯತ್ನಿಸುತ್ತಿದ್ದಾರೆ. ಅಕ್ಕಿ ಸೇರಿದಂತೆ ಗ್ಯಾರಂಟಿಗಳ ಗೊಂದಲ, ಸರ್ಕಾರದ ವೈಫಲ್ಯದ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ.

ರಾಜ್ಯ ಸರ್ಕಾರಸುಳ್ಳ, ಮಳ್ಳ ಸರ್ಕಾರ. ಸುಳ್ಳು ಹೇಳುವುದು ಮತ್ತು ಮಳ್ಳನಂತೆ ಮಾಡುವುದು. ಇವರು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದರು. ಇವರ ಕೈಯಲ್ಲಿ ಒಂದು ಕೆ.ಜಿ ಅಕ್ಕಿ ಕೊಡಲೂ ಆಗಲಿಲ್ಲ. ಈಗ ನೀಡುತ್ತಿರುವ 5 ಕೆ.ಜಿ ಅಕ್ಕಿ ಮೋದಿ ಅವರು ಕೊಡುತ್ತಿರುವುದು. ಕೋವಿಡ್ ಸಂದರ್ಭದಲ್ಲಿ 10 ಕೆ.ಜಿ ಅಕ್ಕಿ ಕೊಟ್ಟರು. ಯಾವಾಗ ಸಂಕಷ್ಟ ಇತ್ತೋ ಆಗ ಮೋದಿ ಧಾವಿಸಿ ಬಂದಿದ್ದಾರೆ. ಪ್ರವಾಹ ಮತ್ತು ಆಪತ್ತು ಕಾಲದಲ್ಲಿ ರಾಜ್ಯದ ನೆರವಿಗೆ ಧಾವಿಸಿ ನರೇಂದ್ರ ಮೋದಿ ಅವರು ಧಾವಿಸಿ ಬಂದಿದ್ದಾರೆ. ಸುಳ್ಳು ಹೇಳುವ ಆರೋಪ ಮಾಡುವ ಬದಲು ಎಲ್ಲರಿಗೂ 10 ಕೆ.ಜಿ ಅಕ್ಕಿ ನೀಡಲಿ ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಅಕ್ಕಿ ಕೊಡಲಿಲ್ಲ ಎನ್ನುತ್ತಿದ್ದಾರೆ. ಹೆಚ್ಚುವರಿ ಅಕ್ಕಿ ಬೇಕು ಎಂದರೆ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಬೇಕು. ನಿಮಗೆ ತಾಕತ್ತಿದ್ದರೆ ಎಲ್ಲಾ ಕಡೆ ಕೇಂದ್ರದ 5 ಕೆಜಿ ಜೊತೆ ನಿಮ್ಮ ಗ್ಯಾರಂಟಿಯ 10 ಕೆಜಿ ಭರವಸೆ ಸೇರಿ 15 ಕೆಜಿ ಅಕ್ಕಿ ಕೊಡಬೇಕು ಎಂದು ಬೊಮ್ಮಾಯಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ :ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಸಾಂಕೇತಿಕ ಪ್ರತಿಭಟನೆ: ಬೊಮ್ಮಾಯಿ, ಅಶೋಕ್ ಸೇರಿ ಕಾರ್ಯಕರ್ತರು ಪೊಲೀಸ್​ ವಶಕ್ಕೆ

ABOUT THE AUTHOR

...view details