ಬೆಂಗಳೂರು:ಮಾಜಿ ಮುಖ್ಯಮಂತ್ರಿ ಜೆ.ಹೆಚ್. ಪಟೇಲ್ ಅವರ ಪತ್ನಿ ಸರ್ವಮಂಗಳ ಪಟೇಲ್ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಸರ್ವಮಂಗಳ ಪಟೇಲ್ ಅವರು ಬೆಂಗಳೂರಿನ 'ಪುಣ್ಯ' ನಿವಾಸದಲ್ಲಿ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. ಮೃತರು ಮೂವರು ಗಂಡು ಮಕ್ಕಳು, ಮೂವರು ಸೊಸೆಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಾಳೆ ಬೆಳಿಗ್ಗೆ ದಾವಣಗೆರೆ ಜಿಲ್ಲೆಯ ಕಾರಿಗನೂರು ಗ್ರಾಮಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಿದ್ದು, ಜೆ.ಹೆಚ್.ಪಟೇಲ್ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.
ಸಿಎಂ ಸಂತಾಪ:
ಸರ್ವಮಂಗಳ ಪಟೇಲ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸರಳತೆ, ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದ ಸರ್ವಮಂಗಳ ಪಟೇಲ್ ಅವರು ಜೆ.ಎಚ್. ಪಟೇಲರ ಬದುಕಿನ ಎಲ್ಲ ಮಜಲುಗಳಲ್ಲಿ ಬೆಂಬಲವಾಗಿ ನಿಂತವರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಕುಟುಂಬ ವರ್ಗದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಸಿಎಂ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಹೆಚ್ಡಿಕೆ ಸಂತಾಪ:
ಸರ್ವಮಂಗಳ ಅವರ ನಿಧನಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸರ್ವಮಂಗಳ ಅವರ ನಿಧನ ತೀವ್ರ ನೋವುಂಟು ಮಾಡಿದೆ. ಮಾತೃ ಹೃದಯವುಳ್ಳ ವ್ಯಕ್ತಿತ್ವ ಹೊಂದಿದ್ದ ಸರ್ವಮಂಗಳರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರು ಮತ್ತು ಬಂಧು ಬಳಗಕ್ಕೆ ಭಗವಂತ ಕರುಣಿಸಲಿ ಎಂದು ಹೆಚ್ಡಿಕೆ ಪ್ರಾರ್ಥಿಸಿದ್ದಾರೆ.