ಬೆಂಗಳೂರು:''ಕೆಲವೊಮ್ಮೆ ಅಧಿಕಾರ ಮತ್ತು ಅಜ್ಞಾನ ಒಟ್ಟೊಟ್ಟಿಗೆ ಸಾಗುತ್ತವೆ. ಅದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಜೀವಂತ ಸಾಕ್ಷಿ'' ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ''2018ರಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ ಹೊರರಾಜ್ಯಗಳ ಗಣ್ಯರಿಗೆ ಆತಿಥ್ಯ ನೀಡಲು ಅಧಿಕಾರಿಗಳನ್ನು ಬಳಕೆ ಮಾಡಿಕೊಂಡಿರಲಿಲ್ಲವೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಸ್ವತಃ ಮುಖ್ಯಮಂತ್ರಿಗಳು, ಸಂಸದೀಯ ಸಚಿವರು, ಇನ್ನೂ ಕೆಲ ಮಂತ್ರಿಗಳು ಸದನವನ್ನೇ ದಿಕ್ಕು ತಪ್ಪಿಸಲು ಯತ್ನಿಸಿದ್ದಾರೆ. ಆಗ ನಾನು ಕೇವಲ ನಿಯೋಜಿತ ಮುಖ್ಯಮಂತ್ರಿ. ರಾಜಭವನದ ಆದೇಶದ ಮೇರೆಗೆ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಎಲ್ಲಾ ವ್ಯವಸ್ಥೆ ಮಾಡಿರುತ್ತದೆ ಎಂಬುದು ಇವರಿಗೆ ತಿಳಿಯದೆ'' ಎಂದು ಪ್ರಶ್ನಿಸಿದ್ದಾರೆ.
ಐಎಎಸ್ ಅಧಿಕಾರಿಗಳನ್ನು ಚಾಕರಿಗೆ ಬಿಟ್ಟಿದ್ದು ತಪ್ಪು:''ಪ್ರಮಾಣವನ್ನೇ ಸ್ವೀಕರಿಸದ ನಿಯೋಜಿತ ಮುಖ್ಯಮಂತ್ರಿ ಯಾವುದಾದರೂ ಆದೇಶ ನೀಡಲು ಸಾಧ್ಯವೇ? ಇಷ್ಟಕ್ಕೂ ಮುಖ್ಯಮಂತ್ರಿಯ ಪ್ರಮಾಣ ವಚನ ಸಮಾರಂಭಕ್ಕೂ, ಪಕ್ಷದ ಕಾರ್ಯಕ್ರಮಕ್ಕೂ ಹೋಲಿಕೆಯೇ? ಇಷ್ಟು ಸಾಮಾನ್ಯ ತಿಳುವಳಿಕೆ ಸ್ವತಃ ಮುಖ್ಯಮಂತ್ರಿ ಹಾಗೂ ಸಂಸದೀಯ ಸಚಿವರಿಗೆ ಇಲ್ಲ ಎಂದರೆ ಏನು ಹೇಳುವುದು? ಇಂಡಿಯಾ ಒಕ್ಕೂಟದ ಸಭೆಗೆ ಬಂದ ಹೊರರಾಜ್ಯಗಳ ನಾಯಕರಿಗೆ ಐಎಎಸ್ ಅಧಿಕಾರಿಗಳನ್ನು ಚಾಕರಿಗೆ ಬಿಟ್ಟಿದ್ದು ತಪ್ಪು ಎಂಬುದು ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಗಿಳಿಪಾಠ ಒಪ್ಪಿಸುವ ಸ್ವಯಂ ಘೋಷಿತ ಸಂವಿಧಾನ ತಜ್ಞರಿಗೆ ಶೋಭೆಯೇ?'' ಎಂದು ಕಿಡಿಕಾರಿದ್ದಾರೆ.