ಬೆಂಗಳೂರು: ಚಿಕಿತ್ಸೆ ದಕ್ಕದೆ ಅತ್ಯಂತ ಅಮಾನವೀಯವಾಗಿ ಸಾವನ್ನಪ್ಪಿದ ಕೊರೊನಾ ಸೋಂಕಿತರ ಶವಗಳ ಗೌರವಯುತ ಅಂತ್ಯ ಸಂಸ್ಕಾರಕ್ಕೆ ಕನಿಷ್ಠ ವ್ಯವಸ್ಥೆಯನ್ನು ಮಾಡುವಲ್ಲಿ ಕೈ ಚೆಲ್ಲಿ ಕುಳಿತಿರುವ ರಾಜ್ಯ ಸರ್ಕಾರದ ವೈಫಲ್ಯ ಅತ್ಯಂತ ಬೇಜವಾಬ್ದಾರಿತನದ ನಿರ್ದಯಿ ವರ್ತನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಎಂಟೂ ದಿಕ್ಕುಗಳಲ್ಲೂ ಮರಗಳಿಲ್ಲದ ಬೆಂಗಾಡು ಅರಣ್ಯ ಭೂಮಿಯಿದೆ. ಇಲ್ಲಿ ಪ್ರತಿದಿನ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತಿಮ ಸಂಸ್ಕಾರಕ್ಕೆ ಕೂಡಲೇ ವ್ಯವಸ್ಥೆ ಮಾಡಬೇಕು. ಸರ್ಕಾರ ಇದನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಸಲಹೆ ಮಾಡಿದ್ದಾರೆ.
ಕೊರೊನಾ ಸೋಂಕಿತರಿಗೆ ಬೆಡ್, ಆಕ್ಸಿಜನ್, ವೆಂಟಿಲೇಟರ್ ಹಾಗೂ ಲಭ್ಯವಿರುವ ಉಪಶಮನದ ಔಷಧಿಗಳನ್ನು ಸರ್ಕಾರ ಕೊಡಲಿಲ್ಲ. ಕನಿಷ್ಠ ಅವರ ಅಂತ್ಯ ಸಂಸ್ಕಾರವನ್ನಾದರೂ ಗೌರವಯುತವಾಗಿ ನಡೆಸಲು ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಅತ್ಯಂತ ನೋವಿನಿಂದ ಕೈ ಮುಗಿದು ಕೇಳಿಕೊಳ್ಳುವುದಾಗಿ ಹೇಳಿದ್ದಾರೆ.