ಬೆಂಗಳೂರು :ಮೈತ್ರಿ ಸರ್ಕಾರ ಕೆಡವಿ ಎರಡು ವರ್ಷ ಶ್ರಮ ಪಟ್ಟಿರುವ ಬಿಜೆಪಿ ಸರ್ಕಾರ, ಈಗ ನಾಯಕತ್ವದ ಕಚ್ಚಾಟದಲ್ಲೇ ಕಾಲಹರಣ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಬೆಂಗಳೂರು ನಗರದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಗೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ರೀತಿ ಶ್ರಮಪಟ್ಟು ಈ ಕೆಲಸ ಮಾಡುತ್ತಿದ್ದಾರಲ್ಲ, ಇದನ್ನು ರಾಜ್ಯದ ಜನತೆಯ ತೀರ್ಮಾನಕ್ಕೆ ಬಿಡುತ್ತೇನೆ ಎಂದರು.
ಮೈತ್ರಿ ಸರ್ಕಾರ ನಡೆಸುವ ಸಂದರ್ಭದಲ್ಲಿ ನಮ್ಮ ಸರ್ಕಾರವನ್ನು ಮಾರಕ ಎಂದು ಹೇಳುತ್ತಿದ್ದ ಬಿಜೆಪಿ, ಇದೀಗ ಜನರ ತೆರಿಗೆ ಹಣವನ್ನು ಯಾವ ರೀತಿ ಸದ್ಬಳಕೆ ಮಾಡಿದ್ದಾರೆ ಎಂಬುದನ್ನು ಅಂಕಿ-ಅಂಶ ಮೂಲಕ ಜನತೆ ಮುಂದೆ ಹೋಗುವ ಕಾಲ ದೂರ ಇಲ್ಲ. ಬಿಜೆಪಿ ಸರ್ಕಾರ ಎರಡು ವರ್ಷ ಪೂರೈಸಿದ್ದು, ರಾಜ್ಯದ ಅಭಿವೃದ್ಧಿಗೆ ಪೂರಕವಾದ ಸಾಧನೆಯೇನೂ ಮಾಡಿಲ್ಲ ಎಂದು ಟೀಕಿಸಿದರು.
ಕೋವಿಡ್‌ನಲ್ಲಾದ ಪರಿಸ್ಥಿತಿ ಸೇರಿದಂತೆ ಜನರ ನೆರವಿಗೆ ತೆರಿಗೆ ಹಣವನ್ನು ಬಳಸಿಲ್ಲ. ಇವತ್ತು ಯೋಜನೆಗಳ ಹೆಸರಲ್ಲಿ ಲೂಟಿ ಮಾಡಿದ್ದೇ ಈ ಸರ್ಕಾರದ ಸಾಧನೆ. ಈ ನಾಡಿಗೆ ಇಂತಹ ಕೆಟ್ಟ ಸರ್ಕಾರ ಇತಿಹಾಸದಲ್ಲೇ ಬಂದಿಲ್ಲ. ಹಿಂದಿನ ಸರ್ಕಾರದಲ್ಲಿ ಹಲವಾರು ಪ್ರಕರಣ ನೋಡಿದ್ದೇವೆ. ಆದರೆ, ಜನತೆಯ ತೆರಿಗೆ ಹಣದಲ್ಲಿ ಸ್ವೇಚ್ಛಾಚಾರದ ರೀತಿ ಲೂಟಿ ಮಾಡಿದ್ದಾರೆ. ಬಿಜೆಪಿ ತನ್ನ ಆಡಳಿತವನ್ನು ಹತ್ತು ವರ್ಷ ಹಿಂದೆ ತೆಗದುಕೊಂಡು ಹೋಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರವಾಹ ಪರಿಸ್ಥಿತಿಯಲ್ಲೂ ಸಿಎಂ ಬದಲಾವಣೆ, ಇದು ರಾಜ್ಯದ ದುರಾದೃಷ್ಟ :ರಾಜ್ಯದಲ್ಲಿ ಮಳೆ ಹೆಚ್ಚಾಗುತ್ತಿದೆ. ಪ್ರವಾಹದ ಪರಿಸ್ಥಿತಿಯ ಈ ಸಮಯದಲ್ಲಿ ಸಿಎಂ ಬದಲಾವಣೆ ವಿಚಾರ ಬಂದಿರುವುದು ಈ ರಾಜ್ಯದ ದುರಾದೃಷ್ಟ ಸಂಗತಿ. 2019ರಿಂದ ದೊಡ್ಡ ಮಟ್ಟದಲ್ಲಿ ಮಳೆ ಅನಾಹುತ ಆಯ್ತು.
ಜೊತೆಗೆ ಕೋವಿಡ್ ಸಮಯದಲ್ಲೂ ಜನ ಕಂಗಾಲಾದ್ರು. ಆದರೆ, ಬಿಜೆಪಿ ಪಕ್ಷ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮುಖ್ಯಮಂತ್ರಿ ಬದಲಾವಣೆ, ನಾಯಕತ್ವ ಬದಲಾವಣೆಯಲ್ಲೇ ಮುಳುಗಿದೆ. ಇದು ನಾಡಿನ ದೌರ್ಬಾಗ್ಯ ಅಂದರೆ ತಪ್ಪಾಗಲಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಠಾಧೀಶರ ಲಾಬಿ ಜನರ ತೀರ್ಮಾನಕ್ಕೆ ಬಿಟ್ಟಿದ್ದು : ಸಿಎಂ ಬದಲಾವಣೆ ಸಂದರ್ಭದಲ್ಲಿ ಮಠಾಧೀಶರ ಲಾಬಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ಅವರವರ ಭಾವನೆ ವ್ಯಕ್ತಪಡಿಸಲು ಮಠಾಧೀಶರು ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಬಂದು ಸಂದೇಶ ನೀಡಲು ಮುಂದಾಗಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ. ಅವರ ತೀರ್ಮಾನ ಸರಿ ಇರಬಹುದು, ಅದು ನನಗೆ ಗೊತ್ತಿಲ್ಲ.
ಜನ ಅಂತಿಮವಾಗಿ ತೀರ್ಮಾನ ಮಾಡಬೇಕು. ಮಠಾಧೀಶರು ತೆಗೆದುಕೊಂಡ ತೀರ್ಮಾನದ ಬಗ್ಗೆ ನಾನು ಲಘುವಾಗಿ ಮಾತನಾಡಲು ಹೋಗಲ್ಲ. ಅವರ ಮನಸ್ಸಿನಲ್ಲಿ ಬಂದ ಭಾವನೆಯನ್ನು ಸಾರ್ವಜನಿಕವಾಗಿ ತಿಳಿಸಿರಬಹುದು.