ಬೆಂಗಳೂರು: ಬಿಜೆಪಿ ಜೊತೆಗೂ ವ್ಯಾಮೋಹ ಇಲ್ಲ. ಕಾಂಗ್ರೆಸ್ ಜೊತೆಗೂ ವ್ಯಾಮೋಹ ಇಲ್ಲ. ಕರ್ನಾಟಕದ ಜನರ ಮೇಲೆ ನನ್ನ ವ್ಯಾಮೋಹ ಇದೆ. ಆ ಎರಡೂ ಪಕ್ಷದವರಿಗೆ ಅಗತ್ಯಬಿದ್ದಾಗ ನನ್ನ ಮೇಲೆ ವ್ಯಾಮೋಹ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಬಿಜೆಪಿ ಜೊತೆ ಸರಂಡರ್ ಆಗಿಲ್ಲ. ಯಾವುದೇ ಪಕ್ಷದ ಜೊತೆ ಸರಂಡರ್ ಆಗುವ ಪ್ರಶ್ನೆಯಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ತಮಗೆ ಬೇಕಾದಂತೆ ವಿಶ್ಲೇಷಣೆ ಮಾಡಿದ್ದಾರೆ ಎಂದರು.
10 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಿದ್ದೇವೆ. ಮೂವರು ನಮ್ಮ ಶಾಸಕರು ಈಗ ಅನರ್ಹರಾಗಿದ್ದಾರೆ. ಅವರ 3 ಕ್ಷೇತ್ರಗಳನ್ನು ಒಳಗೊಂಡಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಮಾಡುತ್ತೇವೆ. ಇನ್ನೂ ನಾಲ್ಕೈದು ಸ್ಥಾನ ಗೆಲ್ಲುವ ಯೋಜನೆ ಮಾಡುತ್ತಿದ್ದೇವೆ. ನಾವು ಈ ಸರ್ಕಾರದ ಬಗ್ಗೆ ಟೀಕೆ ಮಾಡದಿದ್ದರೂ, ನೆರೆಹಾವಳಿಗೆ ತುತ್ತಾದ ಪ್ರದೇಶಕ್ಕೆ ಭೇಟಿ ನೀಡಿದ್ದೇನೆ. ಡಿಸಿಎಂ ಗೋವಿಂದ ಕಾರಜೋಳ ಅವರು ನನಗೆ ಸವಾಲು ಹಾಕಿದ್ದಾರೆ. ಯಾವುದೇ ಸರ್ಕಾರ ಇರಲಿ, ರಾತ್ರೋರಾತ್ರಿ ಪರಿಹಾರ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರಕ್ಕೆ ಸಮಯ ಕೊಡುತ್ತೇನೆ ಎಂದು ಹೇಳಿದ್ದೆ. ನಾನು ಎಲ್ಲಿಯೂ ಕೂಡಾ ಬಿಜೆಪಿಗೆ ಬೆಂಬಲ ಕೊಡುವುದಾಗಿ ಹೇಳಿಲ್ಲ. ನಿನ್ನೆ ದೇವೇಗೌಡರು ವಾಸ್ತವಂಶದ ಬಗ್ಗೆ ಹೇಳಿದ್ದಾರೆ. 7 ಸ್ಥಾನಗಳನ್ನು ಗೆಲ್ಲದಿದ್ದರೆ ಯಡಿಯೂರಪ್ಪನವರಿಗೆ ಕಷ್ಟ ಆಗುತ್ತದೆ. ಕನಿಷ್ಠ 7 ಸ್ಥಾನ ಗೆದ್ದರೆ ಯಡಿಯೂರಪ್ಪ ಮುಂದುವರಿಯುತ್ತಾರೆ. ಇಲ್ಲವಾದರೆ ಸರ್ಕಾರ ಉಳಿಯುವುದಿಲ್ಲ ಎಂದಿದ್ದಾರೆಯೇ ಹೊರತು ನಾವು ಬೆಂಬಲ ಕೊಡುತ್ತೇವೆ ಎಂದು ದೇವೇಗೌಡರು ಹೇಳಿಲ್ಲ. ಬೇರೆ ರೀತಿಯ ವಿಶ್ಲೇಷಣೆಗಳು ಬೇಡ ಎಂದು ಸ್ಪಷ್ಟಪಡಿಸಿದರು.