ಮೈಸೂರು: ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದು ಕನ್ನಡಿಗರಾದ ನಮಗೆ ಸಂತೋಷದ ಸಂಗತಿಯಾಗಿದೆ. ನಾವು ಇದಕ್ಕೆ ಅಸೂಯೆ ಪಡಬಾರದು. ಆದರೆ, ಕರ್ನಾಟಕದ ಕಾಂಗ್ರೆಸ್ನಲ್ಲಿ ಈಗಾಗಲೇ 2 ಪವರ್ ಸೆಂಟರ್ ಇದ್ದು, ಖರ್ಗೆ ಅವರು ಮೂರನೇ ಪವರ್ ಸೆಂಟರ್ ಆಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮೈಸೂರಿನಲ್ಲಿ ಹೇಳಿದ್ದಾರೆ.
ಹಾಲಿ ಜೆಡಿಎಸ್ ಶಾಸಕರು ಹಾಗೂ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಂಭವನೀಯ ಅಭ್ಯರ್ಥಿಗಳ ಜೊತೆ ಹೆಚ್‌ಡಿಕೆ, ನಾಡ ಅಧಿದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪೂರ್ಣ ಪ್ರಮಾಣದ ಸರ್ಕಾರವನ್ನು ಅಸ್ತಿತ್ವಕ್ಕೆ ತರುವಂತೆ ತಾಯಿ ಚಾಮುಂಡೇಶ್ವರಿಯಲ್ಲಿ ಬೇಡಿಕೊಂಡಿದ್ದೇನೆ. ತಾಯಿಯ ಅನುಗ್ರಹದಿಂದ ಹಾಗೂ ಜನರ ಆಶೀರ್ವಾದದಿಂದ ನಾವು ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಪಂಚರತ್ನ ಯೋಜನೆ ಜಾರಿ:ಅಧಿಕಾರಕ್ಕೆ ಬಂದರೆ ಉಚಿತ ಶಿಕ್ಷಣ, ಆರೋಗ್ಯ, ರೈತರ ಸ್ವಾವಲಂಬನೆ ಯೋಜನೆ, ಪತಿಯೊಬ್ಬರಿಗೂ ಸೂರು, ನೀರಾವರಿ ಕಾರ್ಯಕ್ರಮಗಳು ಜಾರಿಗೆ ತರುವ ಪಂಚರತ್ನ ಯೋಜನೆ ಜಾರಿ ಮಾಡುತ್ತೇವೆ. ಹಾಗೆ ಮಾಡಲು ಸಾಧ್ಯವಾಗದಿದ್ದರೆ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ. ಹಾಗಾಗಿ ಪೂರ್ಣ ಪ್ರಮಾಣದ ಸರ್ಕಾರವನ್ನು ಕೊಡುವಂತೆ ಚಾಮುಂಡೇಶ್ವರಿಯಲ್ಲಿ ಬೇಡಿಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಯಾವುದೇ ಕಾರಣಕ್ಕೂ ಬೇರಾವ ಪಕ್ಷದೊಂದಿಗೆ ಹೊಂದಾಣಿಕೆ ಇಲ್ಲ. ಈಗಾಗಲೇ ಎರಡು ಪಕ್ಷಗಳು 150 ಸ್ಥಾನ ಗೆಲ್ಲುವ ಗುರಿ ಹೊಂದಿವೆ. ಆದರೆ ಎರಡು ಪಕ್ಷಕ್ಕೂ ತಮ್ಮ ಆಂತರಿಕ ಶಕ್ತಿ ಏನು ಎಂಬುದು ತಿಳಿದಿದೆ. ಆದ್ದರಿಂದ 2 ಪಕ್ಷಗಳು ಜೆಡಿಎಸ್ ಟೀಕೆ ಮಾಡುತ್ತಿಲ್ಲ ಎಂದರು.